– ನೆಲದಲ್ಲೇ 1 ಬೆಡ್, ಬಾತ್ ರೂಂ
ನವದೆಹಲಿ: 2008ರ ಮುಂಬೈ ದಾಳಿಯ (Mumbai Attack) ಸಂಚುಕೋರ ತಹವ್ವೂರ್ ರಾಣಾನನ್ನ (Tahawwur Rana) 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಶುರು ಮಾಡಿದೆ. ಸದ್ಯ ಎನ್‌ಐಎ ಮುಖ್ಯಕಚೇರಿಯ ಪ್ರತ್ಯೇಕ ಸೆಲ್‌ನಲ್ಲಿ ರಾಣಾನನ್ನು ಸದಾನಂದ ದಾತೆ ನೇತೃತ್ವದ 12 ಅಧಿಕಾರಿಗಳ ಸ್ಪೆಷಲ್ ಟೀಂ ವಿಚಾರಣೆಗೆ ಒಳಪಡಿಸಿದೆ. ಅದರಂತೆ ರಾಣಾನನ್ನ ದೇಶದ ವಿವಿಧ ಭಾಗಗಳಿಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ದಿನದ 24 ಗಂಟೆಯೂ ನಿಗಾ
ಸದ್ಯ ರಾಣಾನನ್ನ ಸುರಕ್ಷಿತವಾಗಿಡಲು 14*14 ಅಡಿಯ ಸೆಲ್ ವ್ಯವಸ್ಥೆ ಮಾಡಲಾಗಿದೆ. ಈ ಸೆಲ್ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ (CGO Complex) ಎನ್‌ಐಎ (NIA) ಕಚೇರಿಯ ಗ್ರೌಂಡ್‌ಫ್ಲೋರ್‌ನಲ್ಲಿ ಇದೆ. ಜೊತೆಗೆ ರಾತ್ರಿ ವೇಳೆಯೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನ ಹೊರಾಂಗಣದಲ್ಲಿ ನಿಯೋಜಿಸಲಾಗಿದೆ. ರಾಣಾ ಕೊಠಡಿ ಪ್ರವೇಶಿಸಲು ಮೂರ್ನಾಲ್ಕು ಹಂತಗಳಲ್ಲಿ ಡಿಜಿಟಲ್ ಸುರಕ್ಷತಾ ಪದರಗಳ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸಲು ಇಂಚಿಂಚಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 12 ಅಧಿಕಾರಿಗಳ ಸ್ಪೆಷಲ್ ಟೀಂಗೆ ಹೊರತುಪಡಿಸಿ ಉಳಿದವರು ಯಾರಿಗೂ ಇಲ್ಲಿ ಪ್ರವೇಸಿಸಲು ಅವಕಾಶ ಇಲ್ಲ ಎಂದು ಎನ್‌ಐಎ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ನೆಲದ ಮೇಲೆಯೇ ಬಾತ್ ರೂಂ
ಇನ್ನೂ ರಾಣಾಗೆ ವ್ಯವಸ್ಥೆ ಮಾಡಲಾದ ಈ ಸೆಲ್ (Speical Cell) ಒಂದು ಭದ್ರಕೋಟೆಯಂತಿದೆ. ನೆಲದ ಮೇಲೆಯೇ ಮಲಗಲು ರಾಣಾಗೆ ಒಂದು ಹಾಸಿಗೆ ಹಾಗೂ ಸ್ನಾನ ಗೃಹದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಊಟ, ಕುಡಿಯುವ ನೀರು, ವೈದ್ಯಕೀಯ ತಪಾಸಣೆ ಎಲ್ಲದಕ್ಕೂ ಆ 14*14 ಅಡಿಯ ಸೆಲ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ.
2008ರ ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾನನ್ನ ಗುರುವಾರ ವಿಶೇಷ ವಿಮಾನದ ಮೂಲಕ ಅಮೆರಿಕದಿಂದ ಭಾರತಕ್ಕೆ ಕರೆತರಲಾಯಿತು. ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ರಾಣಾನನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಪಟಿಯಾಲ ಕೋರ್ಟ್‌ಗೆ ಹಾಜರುಪಡಿಸಿ ಆತನನ್ನ 18 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿತು.
ಸತ್ತ 9 ಲಷ್ಕರ್ ಉಗ್ರರಿಗೆ ಪಾಕ್ ಅವಾರ್ಡ್ ಕೊಡಬೇಕಿತ್ತು:
ಎನ್‌ಐಎ ಅಧಿಕಾರಿಗಳ ತಂಡ ರಾಣಾ ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲೇ ರಾಣಾ ಹಿಂದೆ ನೀಡಿದ್ದ ಹೇಳಿಕೆಯೊಂದು ಬೆಳಕಿಗೆ ಬಂದಿದೆ. ʻʻಮುಂಬೈನಲ್ಲಿ ನರಮೇಧ ನಡೆಸಿ, ಭಾರತೀಯ ಪಡೆಗಳ ಗುಂಡಿಗೆ ಬಲಿಯಾದ 9 ಲಷ್ಕರ್ ಉಗ್ರರಿಗೆ ಪಾಕ್ ಸೈನಿಕರಿಗೆ ನೀಡುವ ʻನಿಶಾನ್ ಎ ಹೈದರ್ʼ ಪ್ರಶಸ್ತಿ ನೀಡಬೇಕುʼʼ ಎಂದು ದಾಳಿಯ ಮಾಸ್ಟರ್‌ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ತಹಾವೂರ್ ರಾಣಾ ಹೇಳಿದ್ದ ಎಂಬ ವಿಚಾರ ಈಗ ಬಯಲಾಗಿದೆ.
ಅಷ್ಟೇ ಅಲ್ಲ, ದಾಳಿಯಿಂದಾದ ಅನಾಹುತಗಳ ಬಗ್ಗೆ ಹೆಡ್ಲಿ ಪ್ರಸ್ತಾಪ ಮಾಡಿದಾಗ, ಭಾರತೀಯರಿಗೆ ಹಾಗೇ ಆಗಬೇಕಿತ್ತು ಎಂದು ರಾಣಾ ನಾಲಗೆ ಹರಿಬಿಟ್ಟಿದ್ದ. ಹಸ್ತಾಂತರದ ವೇಳೆ ಅಮೆರಿಕ ಕಾನೂನು ವಿಭಾಗ ನೀಡಿದ ಪ್ರಕಟಣೆಯಲ್ಲಿ ಈ ಎಲ್ಲಾ ವಿಚಾರ ಅಡಕವಾಗಿದೆ ಎಂದು ತಿಳಿದುಬಂದಿದೆ.