ಯಾದಗಿರಿ: ನಗರ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡುವಂತೆ, ಕಳೆದ ಎರಡು ದಿನಗಳ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುಧವಾರ ಕೈಜೋಡಿಸಲಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯಲಿದ್ದು, ಆದರೆ ಭದ್ರತಾ ದೃಷ್ಟಿಯಿಂದ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಡಳಿತ ಮನವಿಗೆ ಸೊಪ್ಪು ಹಾಕದ ದೇವೇಗೌಡರು ಪ್ರತಿಭಟನೆಯಲ್ಲಿ ಭಾಗವಹಿಸುವುದು ಶತಸಿದ್ಧ ಎಂದು ಕಾರ್ಯಕರ್ತರ ಮುಖಾಂತರ ಜಿಲ್ಲಾಡಳಿತಕ್ಕೆ ಸಂದೇಶ ಕಳುಹಿಸಿದ್ದಾರೆ.
Advertisement
Advertisement
ರೈಲಿನ ಮುಖಾಂತರ ಬುಧವಾರ ಬೆಳಿಗ್ಗೆ 6:40ಕ್ಕೆ ಯಾದಗಿರಿಗೆ ಆಗಮಿಸಲಿರುವ ದೇವೇಗೌಡರು, ಕೆಲ ಹೊತ್ತು ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅಪಾರ ಜೆಡಿಎಸ್ ಕಾರ್ಯಕರ್ತರೊಂದಿಗೆ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನೂ ನಾಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.
Advertisement
ಎಚ್‍ಡಿಡಿ ಹೇಳಿದ್ದೇನು?: ಸಿಎಂ ಬಿಎಸ್‍ವೈ ಅವರ ಕಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಯಾದಗಿರಿ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೀಡಿದ ಅನುದಾನವನ್ನು ಕಡಿತ ಮಾಡಿದ್ದ ಪರಿಣಾಮ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನೆ ಮಾಡಲು ತೆರಳಿದ್ದರು. ಈ ವೇಳೆ ಸಿಎಂ ಅವರ ಕಾರನ್ನು ತಡೆದಿದ್ದಾರೆ. ಈ ಕಾರಣಕ್ಕೆ ಪ್ರಕರಣ ದಾಖಲಿಸಿ ಅವರಿಗೆ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ಕಾರ್ಯರ್ಕತರಿಗೆ ಧೈರ್ಯ ಹೇಳುವ ಸಾಲುವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಎಚ್‍ಡಿ ದೇವೇಗೌಡ ಅವರು ಹೇಳಿದರು.