ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

Public TV
3 Min Read
Vaibhav Suryavanshi 3

– ಎಬಿಡಿ, ಹೆಡ್‌ ಮಿಲ್ಲರ್‌ರಂತಹ ದಿಗ್ಗಜರ ದಾಖಲೆಗಳು ಉಡೀಸ್‌

ಜೈಪುರ: ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2025) ಈ ಬಾರಿ ಹೊಸ ಯುವಕರ ಆರ್ಭಟವೇ ಜೋರಾಗಿದೆ. ಆದ್ರೆ 14 ವರ್ಷದ ಬಾಲಕ ತಾನು ಪ್ರವೇಶಿಸಿದ ಚೊಚ್ಚಲ ಐಪಿಎಲ್‌ ಆವತ್ತಿಯಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಕ್ರಿಕೆಟ್‌ ದಿಗ್ಗಜರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು. ಐಪಿಎಲ್‌ ಅಂದ್ರೆ ಸಿಕ್ಸರ್‌, ಬೌಂಡರಿಗಳ ಅಬ್ಬರ ಇದ್ದೇ ಇರುತ್ತೇ. ಕೆಲವೊಮ್ಮೆ ಬ್ಯಾಟರ್‌ಗಳು ಕಡಿಮೆ ಎಸೆತಗಳಲ್ಲಿ ಭಾರೀ ರನ್‌ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜರೇ ಹೆಚ್ಚಾಗಿರುವ ಈ ಅಖಾಡದಲ್ಲಿ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ (Vaibhav Suryavanshi) ಮಿಂಚುತ್ತಿದ್ದಾರೆ.

ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ಐಪಿಎಲ್‌ ವೃತ್ತಿ ಬದುಕು ಶುರು ಮಾಡಿದ ವೈಭವ್‌ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್‌ ಕೇವಲ 17 ಎಸೆತಗಳಲ್ಲಿ 6 ಸಿಕ್ಸರ್‌, 3 ಬೌಂಡರಿ ಬಾರಿಸುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಮುಂದಿನ 18 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಶತಕ ಪೂರೈಸಿದ್ದಾರೆ. ಒಟ್ಟು ತಾನು ಎದುರಿಸಿದ 38 ಎಸೆತಗಳಲ್ಲಿ 101 ರನ್‌ (11 ಸಿಕ್ಸರ್, 7 ಬೌಂಡರಿ) ಸಿಡಿಸಿ ಔಟಾದರು.

Vaibhav Suryavanshi 1

2ನೇ ಆಟಗಾರನೆಂಬ ದಾಖಲೆ:
ಇಡೀ ಐಪಿಎಲ್‌ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್‌ ಗೇಲ್‌ ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೇಗದ ಶತಕ ಬಾರಿಸಿದ 2ನೇ ಆಟಗಾರ ಜೊತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌ ಉಳಿದಂತೆ ಯೂಸೂಫ್‌ ಪಠಾಣ್‌ (37 ಎಸೆತ), ಡೇವಿಡ್‌ ಮಿಲ್ಲರ್‌ (38 ಎಸೆತ), ಟ್ರಾವಿಸ್‌ ಹೆಡ್‌ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್‌-5 ಆಟಗಾರರಾಗಿದ್ದಾರೆ.

ವೇಗದ ಫಿಫ್ಟಿ:
ಇನ್ನೂ ವೈಭವ್‌ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಡಿಮೆ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.

Vaibhav Suryavanshi 2

ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್‌ ಕೆಕೆಆರ್‌ ವಿರುದ್ಧ ಕೇವಲ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. 2018ರಲ್ಲಿ ಕೆ.ಎಲ್‌ ರಾಹುಲ್‌, 2022ರಲ್ಲಿ ಪ್ಯಾಟ್‌ ಕಮ್ಮಿನ್ಸ್‌ (ಅಂದು ಕೆಕೆಆರ್‌) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ.

ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಆಟಗಾರರು
ವೈಭವ್‌ (ರಾಜಸ್ಥಾನ್‌) – 50 ರನ್‌ – 17 ಎಸೆತ
ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
ಹೆಡ್‌ (ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

Share This Article