ಟ್ರಕ್ ಕದ್ದು ಬರೋಬ್ಬರಿ 138 ಕಿ.ಮೀ. ಚಾಲನೆ ಮಾಡಿದ ಕುಳ್ಳ ಪೋರ! – ಸಿಕ್ಕಿಬಿದ್ದಿದ್ದು ಹೇಗೆ?

Public TV
2 Min Read
TRUCK 1

ಲಕ್ನೋ: 14 ವರ್ಷದ ಕುಳ್ಳ ಬಾಲಕನೊಬ್ಬ ಟ್ರಕ್ ಕಳ್ಳತನ ಮಾಡಿ, 138 ಕಿ.ಮೀ ಚಾಲನೆ ಮಾಡಿಕೊಂಡು ಬಂದು ಉತ್ತರ ಪ್ರದೇಶದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕುಳ್ಳ ಬಾಲಕ ಇಷ್ಟು ದೂರ ಟ್ರಕ್ ಚಾಲನೆ ಮಾಡಿಕೊಂಡು ಬಂದಿರುವುದು ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ ಎತಾ ನಗರದ ಬಾಲಕ ಬಂಧಿತ ಆರೋಪಿ. ಆತನನ್ನು ಹತಾರಾ ಜಿಲ್ಲೆಯಲ್ಲಿ ಪೊಲೀಸರು ಶನಿವಾರ ಬಂಧಿಸಿ, ಟ್ರಕ್ ಹಾಗೂ ಅದರಲ್ಲಿದ್ದ 14 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳನತ ಮಾಡಿದ್ದೇಕೆ?:
ಎತಾ ನಗರದ ನಿವಾಸಿಯಾಗಿರುವ ಬಾಲಕನ ತಂದೆ ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕ ಕೂಡ ಮೂರು ವರ್ಷಗಳಿಂದ ಟ್ರಕ್ ಕ್ಲೀನರ್ ವಿವಿಧ ಡ್ರೈವರ್ ಗಳ ಜೊತೆ ಕೆಲಸ ಮಾಡಿದ್ದಾನೆ. ಪ್ರತಿ ತಿಂಗಳು 5 ಸಾವಿರ ರೂ. ವೇತನ ಪಡೆಯುತ್ತಿದ್ದ ಈತ ತಾನು ಬೇಗನೇ ಶ್ರೀಮಂತನಾಗಬೇಕು ಎನ್ನುವ ಆಸೆಯಿಂದ ಟ್ರಕ್ ಕಳ್ಳತನಕ್ಕೆ ಕೈಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

UP TRUCK Boy

ಕಳ್ಳತನ ಮಾಡಿದ್ದು ಹೇಗೆ?
ನೋಯ್ಡಾದಿಂದ 14 ಲಕ್ಷ ರೂ. ಮೌಲ್ಯದ ಗೂಡ್ಸ್ ತುಂಬಿಕೊಂಡು ಟ್ರಕ್ ಇದೇ ತಿಂಗಳ 11ರಂದು ಪಲ್ವಾಲ್ ಕಡೆಗೆ ಹೊರಟಿತ್ತು. ಟ್ರಕ್‍ನ ಚಾಲಕ ಮುನ್ನಾ ಸಿಂಗ್ ಅವರಿಗೆ ಬಾಲಕ ಕೆಲ ದಿನಗಳ ಹಿಂದೆಯಷ್ಟೇ ಪರಿಚಯವಾಗಿದ್ದ. ಮಾರ್ಗಮಧ್ಯದಲ್ಲಿ ಟ್ರಕ್ ನಿಂದ ಕೆಳಗಿಳಿದು ಮುನ್ನಾ ಸಿಂಗ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಹಣ ಪಾವತಿಸಲು ಹೋಗಿದ್ದರು. ಚಾಲಕ ಕೆಳಗೆ ಇಳಿದಿದ್ದೇ ತಡ ಬಾಲಕ ಅಲ್ಲಿಂದ ಟ್ರಕ್ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.

ಕಳ್ಳತನ ಮಾಡಿದ ಟ್ರಕ್ ಅನ್ನು ಎತಾ ನಗರ ಸಮೀಪದ ಮಾಲವಾನ್ ಹಳ್ಳಿಗೆ ಸಾಗಿಸಲು ಮುಂದಾಗಿದ್ದ. ಅಲ್ಲಿ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಕಳ್ಳತನ ಮಾಡಿದ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಲಾಗುತ್ತದೆ. ಇದರಿಂದಾಗಿ ಅಲ್ಲಿಗೆ ಟ್ರಕ್ ಸಾಗಿಸಲು ಮುಂದಾಗಿದ್ದ ಎನ್ನುವ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

UP TRUCK Boy 1

ಚಕ್ರ ಮಾರಿದ!
ಕಳ್ಳತನ ಮಾಡಿದಾಗ ಬಾಲಕನ ಬಳಿ ಇದ್ದಿದ್ದು ಕೇವಲ 100 ರೂ. ಮಾತ್ರ. ಟ್ರಕ್ ಹತಾರ ತಲುಪುತ್ತಿದ್ದಂತೆ ಡೀಸೆಲ್ ಖಾಲಿಯಾಗಿದೆ. ತನ್ನ ಬಳಿಯಿದ್ದ 100 ರೂ.ಗೆ ಡೀಸೆಲ್ ಹಾಕಿದ್ರೂ ಟ್ರಕ್ ಮಾಲವಾನ್ ಗ್ರಾಮಕ್ಕೆ ತಲುಪುವುದಿಲ್ಲ ಎಂದು ಅರಿತ ಬಾಲಕ ಟ್ರಕ್ ನಲ್ಲಿದ್ದ ಸ್ಪೇರ್ ಚಕ್ರವನ್ನು ಮಾರಾಟ ಮಾಡಿದ್ದಾನೆ.

ಸಿಕ್ಕಿಬಿದ್ದಿದ್ದು ಹೇಗೆ?
ಬಾಲಕ ಕುಳ್ಳನಿದ್ದರೂ ಟ್ರಕ್ ಚಾಲನೆ ಮಾಡಿಕೊಂಡಿದ್ದನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಮುನ್ನಾ ಸಿಂಗ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು, ಟ್ರಕ್‍ನಲ್ಲಿ ಅಳವಡಿಸಿದ್ದ ಜಿಪಿಎಸ್ ಮೂಲಕ ಬಾಲಕ ಹೋಗುತ್ತಿರುವ ಮಾರ್ಗವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಾಲಕ ಸಲೀಸಾಗಿ ಚಾಲನೆ ಮಾಡಿ ಟ್ರಕ್ ಅನ್ನು ಠಾಣೆಗೆ ತಂದು ನಿಲ್ಲಿಸಿದ್ದನ್ನು ನೋಡಿ ಪೊಲೀಸರೇ ಆಶ್ಚರ್ಯಗೊಂಡಿದ್ದಾರೆ.

ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ), 411 (ಕಳ್ಳತನದ ವಸ್ತಗಳನ್ನು ಸ್ವೀಕರಿಸುವುದು), ಹಾಗೂ 414 (ಕಳವು ವಸ್ತುಗಳನ್ನು ಬಚ್ಚಿಡಲು ಸಹಾಯ ಮಾಡುವುದು) ಅಡಿ ಪ್ರಕರಣ ದಾಖಲಾಗಿದೆ. ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಭಾನುವಾರ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *