ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ ಕಾಮುಕರ ಕಾಟಕ್ಕೆ ಏನೂ ಅರಿಯದ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ.
ಬಾಲಕಿಗೆ ಎಂಟು ತಿಂಗಳು ತುಂಬಿದಾಗ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ. ಬಾಲಕಿ ಹಾಗೂ ಶಿಶು ಆರೋಗ್ಯವಾಗಿದ್ದಾರೆ. ಆದ್ರೆ ಈಗ ಬಾಲಕಿಯ ಪೋಷಕರು ಮಗಳು ಬೇಕಿಲ್ಲ, ಮೊಮ್ಮಗನೂ ಬೇಕಿಲ್ಲ ಅಂತ ದೂರವಿಟ್ಟಿದ್ದಾರೆ. ಬಾಲಕಿ ಮಾತ್ರ ತನ್ನ ಮಗು ಬೇಕು ಅಂತ ಹಂಬಲಿಸುತ್ತಿದ್ದಾಳೆ.
ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ತಾಯಿ ಮಗುವನ್ನ ರಾಯಚೂರಿನ ಬಾಲಮಂದಿರಕ್ಕೆ ಸೇರಿಸಿದ್ದಾರೆ. ರಾಯಚೂರಿನಲ್ಲಿ ತಾಯಿ-ಮಕ್ಕಳ ಆರೈಕೆ ಕೇಂದ್ರವಿಲ್ಲದ ಕಾರಣ ಬಳ್ಳಾರಿ ಅಥವಾ ಬಾಗಲಕೋಟಿಗೆ ಬಾಲಕಿ ಹಾಗೂ ಶಿಶುವನ್ನ ಕಳುಹಿಸುವುದಾಗಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಜಯಶ್ರಿ ಚನ್ನಾಳ ಹೇಳಿದ್ದಾರೆ.
ಮದುವೆಯಾಗುವುದಾಗಿ ಪುಸಲಾಯಿಸಿ ಗ್ರಾಮದ ವಿರೇಶ್ ಹಾಗೂ ಶಿವರಾಜ್ ಎಂಬವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಗರ್ಭಿಣಿಯಾದಾಗಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಗರ್ಭ ತೆಗೆಸಲು ಪೋಷಕರು ಪ್ರಯತ್ನಿಸಿದಾಗ ಎಂಟು ತಿಂಗಳು ತುಂಬಿರುವುದು ತಾಯಿ ಜೀವಕ್ಕೆ ಕುತ್ತು ತರಬಹುದು ಅಂತ ಹೆದರಿ ಸುಮ್ಮನಾಗಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಏಪ್ರಿಲ್ 2 ರಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.