ಸೋಮವಾರದಿಂದ ಡೊನಾಲ್ಡ್ ಟ್ರಂಪ್ ಅವರ ಭಾರತದ ಅಧಿಕೃತ ಪ್ರವಾಸ ಆರಂಭಗೊಳ್ಳಲಿದ್ದು ಈಗಾಗಲೇ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಬೆಂಗಾವಲು ವಾಹನಗಳು ಗುಜರಾತಿನ ಅಹಮದಾಬಾದಿಗೆ ಬಂದಿಳಿದಿದೆ.
ಅಮೆರಿಕದ ಅಧ್ಯಕ್ಷರು ಬಳಸುವ ಅಧಿಕೃತ ‘ಬೀಸ್ಟ್’ ಕಾರು ಸೇರಿದಂತೆ 14 ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ. ಈ ವಾಹನಗಳು ಈಗಾಗಲೇ ವಿಶೇಷ ಕಾರ್ಗೋ ವಿಮಾನದ ಮೂಲಕ ಲ್ಯಾಂಡ್ ಆಗಿದೆ. ಈ 14 ವಾಹನಗಳ ವಿಶೇಷತೆ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
Advertisement
Advertisement
1. ಸ್ವೀಪರ್ಸ್:
14 ಬೆಂಗಾವಲು ಪಡೆಯ ವಾಹನಗಳು ಒಟ್ಟೊಟ್ಟಿಗೆ ರಸ್ತೆಯಲ್ಲಿ ಸಂಚರಿಸುವಾಗ ಆರಂಭದಲ್ಲಿ ಬೈಕ್ ನಲ್ಲಿ ಪೊಲೀಸ್ ಸಿಬ್ಬಂದಿ ಸಂಚರಿಸುತ್ತಾರೆ. ರಸ್ತೆಯ ಬದಿಯಲ್ಲಿ ಜನರಿದ್ದರೆ , ಆ ವ್ಯಕ್ತಿಗಳು ರಸ್ತೆಗೆ ಬಾರದಂತೆ ತಡೆದು ನಿಲ್ಲಿಸಿ ಸುಗಮ ಸಂಚಾರಕ್ಕೆ ಈ ಸಿಬ್ಬಂದಿ ಅನುವು ಮಾಡಿಕೊಡುತ್ತಾರೆ.
Advertisement
2. ರೂಟ್ ಕಾರ್:
ಬೆಂಗಾವಲು ಪಡೆಯಲ್ಲಿ ಮೊದಲು ಈ ಕಾರು ಕಾಣಿಸುತ್ತದೆ. ಸಂಪೂರ್ಣವಾಗಿ ಬೆಂಗಾವಲು ಪಡೆಯನ್ನು ಈ ಕಾರು ಮುನ್ನಡೆಸುತ್ತದೆ. ಸಾಧಾರಣವಾಗಿ ದುಬಾರಿ ಬೆಲೆಯ ಎಸ್‍ಯುವಿ(ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಅಥವಾ ಹೈ ಎಂಡ್ ಸೆಡಾನ್ ಕಾರು ಇರುತ್ತದೆ. ಟ್ರಂಪ್ ಅವಧಿಯಲ್ಲಿ ಬಿಎಂಡಬ್ಲ್ಯೂ ಸೆಡಾನ್ ಕಾರು ಹಲವು ಬಾರಿ ರೂಟ್ ಕಾರ್ ಆಗಿ ಬಳಕೆಯಾಗಿದೆ.
Advertisement
3. ಲೀಡ್ ಕಾರ್:
ಹೆಸರೇ ಹೇಳುವಂತೆ ಟ್ರಂಪ್ ಕಾರಿಗೆ ಭದ್ರತೆ ನೀಡುವ ಕಾರು. ಈ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಕುಳಿತಿರುತ್ತಾರೆ. ಶಸ್ತ್ರ ಸಜ್ಜಿತ ಎಸ್‍ಯುವಿ ಶೆವರ್ಲೆಟ್ ಸಬ್ ಅರ್ಬನ್ ಕಾರನ್ನು ಬಳಕೆ ಮಾಡಲಾಗುತ್ತದೆ.
4. ದಿ ಡಿಕೊಯ್ ಕಾರ್:
ಒಂದು ವೇಳೆ ಬೀಸ್ಟ್ ಕಾರಿನ ಮೇಲೆ ದಾಳಿ ನಡೆದರೆ ಅಧ್ಯಕ್ಷರನ್ನು ಪಾರು ಮಾಡಲೆಂದು ಈ ಕಾರನ್ನು ಬಳಸಲಾಗುತ್ತದೆ. ಬೀಸ್ಟ್ ಕಾರಿನ ಮುಂದೆ ಈ ಕಾರು ಸಂಚರಿಸುತ್ತಿರುತ್ತದೆ. ಬೀಸ್ಟ್ ಕಾರಿನಲ್ಲಿ ಏನೇಲ್ಲ ವಿಶೇಷತೆಗಳು ಇದೆಯೋ ಅದೆಲ್ಲವೂ ಈ ಕಾರಿನಲ್ಲಿ ಇರುತ್ತದೆ.
5. ದಿ ಬೀಸ್ಟ್ ಕಾರು:
ಯಾವುದೇ ವಿದೇಶ ಪ್ರವಾಸ ಕೈಗೊಂಡರೂ ಅಮೆರಿಕದ ಅಧ್ಯಕ್ಷರು ರಸ್ತೆಯಲ್ಲಿ ಈ ಕಾರಿನ ಮೂಲಕವೇ ಸಂಚರಿಸುತ್ತಾರೆ. ಶಸ್ತ್ರ ಸಜ್ಜಿತ ಕಾರು ಇದಾಗಿದ್ದು ಯಾವುದೇ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಟ್ರಂಪ್ ಜೊತೆಗೆ ಭಾರತಕ್ಕೆ ಬರುತ್ತಿದೆ ದಿ ಬೀಸ್ಟ್ ಕಾರ್- ಕಾರಿನ ವಿಶೇಷತೆ ಏನು? ಮೈಲೇಜ್ ಎಷ್ಟು?
6. ಹಾಫ್‍ಬ್ಯಾಕ್:
ಬೀಸ್ಟ್ ಕಾರಿನ ಹಿಂದೆ ಹಾಫ್‍ಬ್ಯಾಕ್ ಕಾರು ಸಂಚರಿಸುತ್ತದೆ. ಈ ಕಾರಿನಲ್ಲಿ ಅಮೆರಿಕ ಸೀಕ್ರೇಟ್ ಸರ್ವಿಸ್ ಅಧಿಕಾರಿಗಳು ಸಂಚರಿಸುತ್ತಾರೆ. ಭದ್ರತಾ ಉದ್ದೇಶದಿಂದಾಗಿ ಹಲವು ಕಾರುಗಳನ್ನು ಬಳಕೆ ಮಾಡಲಾಗುತ್ತದೆ. ಈ ಎಸ್‍ಯುವಿ ಕಾರುಗಳು ಶಸ್ತ್ರ ಸಜ್ಜಿತವಾಗಿ ಇರುತ್ತದೆ.
7. ವಾಚ್ ಟವರ್:
ವಿಶ್ವದ ದೊಡ್ಡಣ್ಣ ಅಮೆರಿಕ ಆದ ಕಾರಣ ಅಧ್ಯಕ್ಷರಿಗೆ ಯಾವಾಗಲೂ ಶತ್ರುಗಳಿಂದ ಬೆದರಿಕೆ ಇದ್ದೆ ಇರುತ್ತದೆ. ಈ ಬೆದರಿಕೆ ಮಟ್ಟ ಹಾಕಲು ಅಧ್ಯಕ್ಷರು ಸಂಚರಿಸುವ ಸಂದರ್ಭದಲ್ಲಿ ವಾಚ್ ಟವರ್ ವಾಹನ ಸಂಚರಿಸುತ್ತದೆ. ಮೇಲುಗಡೆ ದೊಡ್ಡ ಏರಿಯಲ್ ಗಳು ಮತ್ತು ಒಂದು ಗುಮ್ಮಟ ಇರುತ್ತದೆ. ಇದರಲ್ಲಿ ಸಿಗ್ನಲ್ ಜಾಮರ್ ಗಳು, ರೇಡಾರ್ ಜಾಮ್ ಮಾಡುವ ವ್ಯವಸ್ಥೆ ಇದೆ. ಅಷ್ಟೇ ಅಲ್ಲದೇ ಶ್ವೇತಭವನ ಮತ್ತು ಪೆಂಟಾಗನ್(ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಇರುವ ಸ್ಥಳ) ಜೊತೆ ನೇರ ಸಂಪರ್ಕ ಸಾಧಿಸುವ ವ್ಯವಸ್ಥೆ ಇರುತ್ತದೆ. ಫೋರ್ಡ್ ಕಂಪನಿಯ ಕಸ್ಟಮೈಸ್ಡ್ ಎಸ್‍ಯುವಿ ಕಾರು ವಾಚ್ ಟವರ್ ಆಗಿ ಕಾರ್ಯನಿರ್ವಹಿಸುತ್ತದೆ.
8. ಕಂಟ್ರೋಲ್ ಕಾರು:
ಈ ಕಾರಿನಲ್ಲಿ ಅಧ್ಯಕ್ಷರ ಸಿಬ್ಬಂದಿ, ವೈದ್ಯರು, ಮಿಲಿಟರಿ ಸಿಬ್ಬಂದಿ ಇರುತ್ತಾರೆ.
9. ಭದ್ರತಾ ಪಡೆಯ ಕಾರು:
ಅಮೆರಿಕ ಸಿಕ್ರೇಟ್ ಸರ್ವಿಸ್ ಯೋಧರು ಈ ಕಾರಿನಲ್ಲಿ ತೆರಳುತ್ತಿರುತ್ತಾರೆ. ಇದನ್ನೂ ಓದಿ: ‘ನಾನು ಬಾಹುಬಲಿ’ ಎಂದ ಡೊನಾಲ್ಡ್ ಟ್ರಂಪ್ – ವಿಡಿಯೋ ವೈರಲ್
10. ಪ್ರೆಸ್ ಬಸ್:
ಅಮರಿಕದ ಪ್ರಮುಖ ಮಾಧ್ಯಮಗಳ ಪತ್ರಕರ್ತರು, ಶ್ವೇತ ಭವನದ ಮಾಧ್ಯಮ ತಂಡದ ಸದಸ್ಯರು ಇರುತ್ತಾರೆ.
11. ಅಪಾಯವನ್ನು ತಪ್ಪಿಸುವ ವಾಹನ
ಅಣ್ವಸ್ತ್ರ, ಜೈವಿಕ ಅಥವಾ ರಾಸಾಯನಿಕ ಅಸ್ತ್ರ ದಾಳಿಯನ್ನು ತಡೆಯಬಲ್ಲ ಸಾಧನಗಳು ಈ ವಾಹನದಲ್ಲಿ ಇರುತ್ತದೆ.
12, 13 ಬೆಂಗಾವಲು ಬಸ್:
ಬೆಂಗಾವಲು ಪಡೆಗೆ ನಿಯೋಜನೆಗೊಂಡಿರುವ ಇತರೆ ಸದಸ್ಯರನ್ನು ಈ ಬಸ್ಸು ಹೊತ್ತುಕೊಂಡು ಸಾಗುತ್ತದೆ.
14. ಪೊಲೀಸ್ ಕಾರು:
ಹಿಂದುಗಡೆಯಿಂದ ಯಾವುದೇ ವಾಹನ ನುಗ್ಗದಂತೆ ತಡೆಯಲು ಪೊಲೀಸರು ಈ ಕಾರಿನಲ್ಲಿ ಇರುತ್ತಾರೆ. ಇಷ್ಟೇ ಅಲ್ಲದೇ ಎರಡು ಬದಿಗಳಲ್ಲಿ ರಕ್ಷಣಾ ಸಿಬ್ಬಂದಿಯ ಇತರೇ ಕಾರುಗಳ ಸಂಚರಿಸಿದರೆ ಅಧ್ಯಕ್ಷರ ಕಾರು ರಸ್ತೆಯ ಮಧ್ಯದಲ್ಲಿ ಸಂಚರಿಸುತ್ತಿರುತ್ತದೆ.