ಬೆಳಗಾವಿ: ಜಿಲ್ಲೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮಕ್ಕಳು, ಮಹಿಳೆಯರ ಮೇಲೆ ಈ ಶ್ವಾನಗಳು ಅಟ್ಯಾಕ್ ಮಾಡುತ್ತಿದ್ದು, ರಾತ್ರಿಯಾದರೆ ಸಾಕು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಜನವರಿಯಿಂದ ಜುಲೈ ಮೊದಲ ವಾರದವರೆಗೆ ಕೇವಲ ಆರು ತಿಂಗಳಲ್ಲಿ ಬರೋಬ್ಬರಿ 14,278 ಜನರಿಗೆ ಈ ನಾಯಿಗಳು ಕಚ್ಚಿದ್ದು ಎಲ್ಲರೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ಈ ಬಗ್ಗೆ ಡಿಎಚ್‍ಒ ಡಾ.ಮಹೇಶ್ ಕೋಣಿ ಪ್ರತಿಕ್ರಿಯಿಸಿ, ಈ ವರ್ಷ ಆರು ತಿಂಗಳಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ನಾಯಿಗಳು ಜನರಿಗೆ ಕಚ್ಚಿವೆ. ಈಗಾಗಲೇ ಈ ಕುರಿತು ಇಲಾಖೆ ಸಭೆಯಲ್ಲಿ ಪ್ರಸ್ತಾವನೆ ಕೂಡ ಆಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚು ಜನ ದಾಖಲಾಗಿದ್ದಾರೆ. ನಾಯಿ ಕಡಿತಕ್ಕೆ ಲಸಿಕೆ ಇದ್ದು ಯಾವ ತೊಂದರೆ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ
ಸದ್ಯ ಗ್ರಾಮೀಣ ಭಾಗ ಅಷ್ಟೇ ಅಲ್ಲದೇ ನಗರ ಪ್ರದೇಶದಲ್ಲೂ ನಾಯಿಗಳ ಹಾವಳಿ ಮೀತಿಮಿರಿದೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಅಭಯ್ ಪಾಟೀಲ್ ಕೂಡ ಸೂಚನೆ ನೀಡಿದ್ದಾರೆ. ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಶಾಲಾ ಆವರಣದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳು ಗುಂಪು, ಗುಂಪಾಗಿ ಓಡಾಡುತ್ತಿದೆ. ಹೀಗಾಗಿ ಸಾರ್ವಜನಿಕರು ಸೇರಿದಂತೆ ಎಲ್ಲರೂ ಕೂಡ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅಭಯ್ ಪಾಟೀಲ್ ಆದಷ್ಟು ಬೇಗ ನಾಯಿಗಳನ್ನು ನಗರದಿಂದ ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ – ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ
ದಿನೇ ದಿನೇ ನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್ ಮಾಡುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡುವ ಕೆಲಸ ಮಾಡಬೇಕಾಗಿದೆ.