– ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಸ್ವಾಗತ
ಕೋಲಾರ: ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದ 14 ಯೋಧರನ್ನು ಜನತೆ ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡಿದ್ದಾರೆ.
ಕಳೆದ 17 ವರ್ಷಗಳ ಕಾಲ ದೇಶದ ವಿವಿಧ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ 14 ಜನ ಕೋಲಾರದ ಯೋಧರನ್ನು ಜಿಲ್ಲೆಯ ಜನ ಅದ್ಧೂರಿಯಾಗಿ ಬರಮಾಡಿಕೊಂಡರು. 2003ರ ಜನವರಿಯಲ್ಲಿ ಆಯ್ಕೆಯಾದ ಒಂದೇ ಬ್ಯಾಚ್‍ನ ವಿವಿಧ ರೆಜಿಮೆಂಟ್ಗಳಲ್ಲಿ ಕೆಲಸ ಮಾಡಿರುವ 14 ಯೋಧರು ಇಂದು ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದರು.
Advertisement
Advertisement
ಈ ಸಂದರ್ಭದಲ್ಲಿ ಅವರನ್ನು ಕೋಲಾರ ಜಿಲ್ಲಾ ಮಾಜಿ ಯೋಧರ ಸಂಘ, ಟೀಂ ಯೋಧ ನಮನ, ಶ್ರೀರಾಮ ಸೇನೆ ಹಾಗೂ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು. ಕೋಲಾರದ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ಯೋಧರು ಮೊದಲಿಗೆ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಯೋಧರಿಗೆ ತಿಲಕವನ್ನಿಡುವ ಮೂಲಕ ಆರತಿಯೆತ್ತಿ ಜಯ ಘೋಷಣೆಗಳನ್ನು ಕೂಗಿದರು. ಬಳಿಕ ತೆರೆದ ವಾಹನದಲ್ಲಿ ಯೋಧರನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಭಾರತಾಂಬೆಯ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.
Advertisement
Advertisement
14 ನಿವೃತ್ತ ಯೋಧರ ಆಗಮನ ಕೋಲಾರದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಮೆರವಣಿಗೆ ನಂತರ ಕಾಲೇಜು ವೃತ್ತದಲ್ಲಿರುವ ವೇದಿಕೆಗೆ ಆಗಮಿಸಿದ ಸಿಪಾಯಿಗಳನ್ನು ನೂರಾರು ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಯೋಧರು ಹಾಗೂ ಅವರ ಕುಟುಂಬಗಳನ್ನು ಸನ್ಮಾನ ಮಾಡಲಾಯಿತು. ನೆರೆದಿದ್ದ ವಿದ್ಯಾರ್ಥಿಗಳಂತೂ ಯೋಧರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಕಾಲು ಮುಟ್ಟಿ ನಮಸ್ಕಾರ ಮಾಡಿದರು.
ಇದೇ ವೇಳೆ ಯುವಕರು ಹೆಚ್ಚಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ನಿವೃತ್ತ ಯೋಧರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಲ್ಲದೆ ಗಡಿಯಲ್ಲಾದ ಅನುಭವ ಹಾಗೂ ತಾಯಿ ಸೇವೆಯನ್ನು ಸ್ಮರಿಸಿಕೊಂಡು ಯುವಕರನ್ನು ವೀರ ಯೋಧರು ಹುರಿದುಂಬಿಸಿದರು. ಯೋಧರ ಪ್ರತಿಯೊಂದು ಮಾತಿಗೂ ಶಿಳ್ಳೆ ಚಪ್ಪಾಳೆ ಜೋರಾಗಿತ್ತು. ಅಲ್ಲದೆ ನಿವೃತ್ತ ಯೋಧರನ್ನು ಜಿಲ್ಲಾಡಳಿತ ಹಾಗೂ ಸರ್ಕಾರಗಳು ಆತ್ಮೀಯವಾಗಿ ಸ್ವಾಗತ ಮಾಡುವ ಪ್ರವೃತ್ತಿ ಬೆಳೆಯಬೇಕೆಂಬುದು ದೇಶ ಭಕ್ತರು ಸಲಹೆಯಾಗಿತ್ತು.