ಗಾಂಧಿನಗರ: ಅಮೆರಿಕದಲ್ಲಿ ಪಟ್ಟ ಕಂದಮ್ಮಗಳಿಗೆ ಕೊರೊನಾ ಬಂದಿದ್ದು, ಇದೀಗ ಭಾರತದಲ್ಲೂ 14 ತಿಂಗಳ ಮಗುವಿಗೆ ಕೊರೊನಾ ಇರುವುದು ಪತ್ತೆಯಾಗಿದೆ.
ಹೌದು. ಗುಜರಾತಿನ ಜಮ್ನಾನಗರ್ ಜಿಲ್ಲೆಯ ಗಂಡು ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಗ್ಯ ಅಧಿಕಾರಿಗಳು ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಾನುವಾರ ಮಗುವಿಗೆ ಕೊರೊನಾ ಪಾಸಿಟಿವ್ ಇರೋದು ಬೆಳಕಿಗೆ ಬಂದಿದ್ದು, ಸದ್ಯ ಮಗು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಹೆತ್ತವರು ಕಾರ್ಮಿಕರಾಗಿದ್ದು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿರೋದರ ಹಿನ್ನೆಲೆಯಲ್ಲಿ ಪುಟ್ಟ ಗ್ರಾಮವೊಂದರಲ್ಲಿ ನೆಲೆಸಿದ್ದಾರೆ.
ಈ ಮೂಲಕ ಜಮ್ನಾನಗರ್ ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆಯಾಗಿದೆ. ಒಟ್ಟಿನಲ್ಲಿ ಮಗುವಿಗೆ ಕೊರೊನಾ ಬಂದಿರುವುದನ್ನು ಪತ್ತೆ ಹಚ್ಚಲು ಆರೋಗ್ಯ ಅಧಿಕಾರಿಗಳಿಗೆ ಒಂದು ದೊಡ್ಡ ಟಾಸ್ಕ್ ಇದಾಗಿದೆ.
ಮಗುವಿನ ಪೋಷಕರು ಕಾರ್ಮಿಕರಾಗಿದ್ದು, ಇತ್ತೀಚೆಗೆ ತೆರಳಿದ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ಮಗುವಿಗೆ ಹೇಗೆ ಕೊರೊನಾ ಬಂದಿದೆ ಎಂಬುದನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರವಿ ಂಕರ್ ತಿಳಿಸಿದ್ದಾರೆ.
ಮಗುವಿನ ಪೋಷಕರು ಮೂಲತಃ ಉತ್ತರಪ್ರದೇಶದವರಾಗಿದ್ದು, ಡೇರ್ಡ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಆ ಪ್ರದೇಶ ಬಿಟ್ಟು ಎಲ್ಲೂ ಹೋಗದೆ ಹಲವು ದಿನಗಳೇ ಕಳೆದಿತ್ತು. ಆದರೂ ದಂಪತಿಯ 14 ತಿಂಗಳ ಮಗನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿರುವುದು ಅಲ್ಲಿಯ ಜನರಲ್ಲಿ ಅಚ್ಚರಿ ಹುಟ್ಟಿಸಿದೆ ಎಂದು ಡಿಸಿ ವಿವರಿಸಿದ್ದಾರೆ.
ಲಕ್ಷಣಗಳು ಕಂಡು ಬಂದ ಕೂಡಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೋಷಕರು ಶನಿವಾರ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಭಾನುವಾರ ಪರೀಕ್ಷೆ ನಡೆಸಿದಾಗ ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಬಾಲಕನ ಹೆತ್ತವರು ಆರೋಗ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಲಾಗಿದೆ.