ಚಿಕ್ಕಮಗಳೂರು: ದನ ಕೊಟ್ಟಿಗೆಯಲ್ಲಿ ವಾಸವಿದ್ದ 14 ಅಡಿಯ ಬೃಹತ್ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ತಿಪ್ಪಯ್ಯ ಎಂಬುವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ ಹಸುವನ್ನ ಹೊರಗೆ ಕಟ್ಟಲು ತರುವಾಗ ಕೊಟ್ಟಿಗೆಯಲ್ಲಿ ಕಾಳಿಂಗ ಬುಸುಗುಟ್ಟುವ ಶಬ್ದ ಕೇಳಿ ಹುಡುಕಿದ್ದಾರೆ. ಈ ವೇಳೆ ಬೃಹತ್ ಸರ್ಪವನ್ನ ನೋಡಿ ಭಯದಿಂದ ಹೊರ ಓಡಿದ್ದು ಕೂಡಲೇ ಸ್ಥಳಿಯ ಉರಗತಜ್ಞ ಸ್ನೇಕ್ ಹರೀಂದ್ರ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
Advertisement
ಮಾಹಿತಿ ಪಡೆದು ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಕಾಳಿಂಗವನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಎರಡು ಬಾರಿ ಹರೀಂದ್ರ ಮೇಲೆ ಬಾಯ್ತೆರೆದು ದಾಳಿಗೆ ಮುಂದಾಗಿದೆ. ಆದರೆ, ಒಂದೂವರೆ ಗಂಟೆಯ ಬಳಿಕ ಕಾಳಿಂಗ ಸರ್ಪವನ್ನು ಸೆರೆಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.