– ಡ್ರಮ್ನಲ್ಲಿ ಮಗುವಿನ ಮೃತದೇಹ ಪತ್ತೆ
– ಗಂಡು ಮಗುವಿಗಾಗಿ ಕರುಳಕುಡಿಯನ್ನೇ ಕೊಂದ ಅಮ್ಮ
ಭೋಪಾಲ್: ಗಂಡು ಮಗುವಿಗಾಗಿ ತಾಯಿಯೊಬ್ಬಳು ತನ್ನ ಒಂದು ತಿಂಗಳ ಹೆಣ್ಣು ಹಸುಗೂಸನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಭೋಪಾಲ್ ಜಿಲ್ಲೆಯ ಖಜುರಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಸರಿತಾ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆಣ್ಣು ಮಗುವಿನ ಸಾವಿನ ಬಗ್ಗೆ ಪೊಲೀಸರು ನಡೆಸಿದ ತನಿಖೆಯ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಮಗುವಿನ ಮೃತದೇಹ ನೀರಿನಿಂದ ತುಂಬಿದ ಡ್ರಮ್ನಲ್ಲಿ ಪತ್ತೆಯಾಗಿತ್ತು.
Advertisement
Advertisement
ಪೊಲೀಸರು ಈಗ 25 ವರ್ಷದ ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಲಿಸಿದ್ದಾರೆ. ಗಂಡು ಮಗುವನ್ನು ಹೊಂದಲು ಬಯಸಿದ್ದರಿಂದ ಸರಿತಾ ಹೆಣ್ಣು ಮಗುವನ್ನು ಕೊಂದಿದ್ದಾಳೆ. ಅಲ್ಲದೇ ಮಗು ಹುಟ್ಟಿದಾಗಿನಿಂದ ಮಹಿಳೆ ಸಂತೋಷವಾಗಿರಲಿಲ್ಲ ಮತ್ತು ಮಗುವನ್ನು ದ್ವೇಷಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಸರಿತಾ ಸುಮಾರು 14 ತಿಂಗಳ ಹಿಂದೆ ಡೆಹರಿಯಾ ಕಲಾನ್ ನಿವಾಸಿ ಸಚಿನ್ ಮೆವಾಡಾ ಜೊತೆ ವಿವಾಹವಾಗಿದ್ದಳು. ಒಂದು ತಿಂಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬುಧವಾರ ಸರಿತಾ ತನ್ನ ಮಗುವಿನ ಜೊತೆ ಮನೆಯಲ್ಲಿ ಒಬ್ಬಳೇ ಇದ್ದಳು. ಸ್ವಲ್ಪ ಸಮಯದ ನಂತರ ಮಗಳು ನಾಪತ್ತೆಯಾಗಿದ್ದಾಳೆಂದು ಹೇಳುತ್ತಾ ಇದ್ದಕ್ಕಿದ್ದಂತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ಆಕೆಯ ಅತ್ತೆ-ಮಾವ ಮತ್ತು ಪತಿ ಜಮೀನಿಗೆ ಹೋಗಿದ್ದರು ಎಂದು ಇನ್ಸ್ಪೆಕ್ಟರ್ ಎಲ್.ಡಿ ಮಿಶ್ರಾ ಹೇಳಿದ್ದಾರೆ.
ಮಗುವನ್ನು ಪ್ರಾಣಿ ಕೊಂದಿರಬಹುದು ಅಥವಾ ತೆಗೆದುಕೊಂಡು ಹೋಗಿರಬಹುದು ಎಂದು ಮೊದಲಿಗೆ ಶಂಕಿಸಲಾಗಿತ್ತು. ನಂತರ ನಾವು ಜಮೀನು, ಹೊಲಗಳು ಸೇರಿದಂತೆ ಎಲ್ಲೆಡೆ ಮಗುವನ್ನು ಹುಡುಕಿದೆವು. ಆದರೆ ಎಲ್ಲೂ ಮಗು ಪತ್ತೆಯಾಗಿಲ್ಲ. ಕೊನೆಗೆ ಸರಿತಾ ಮನೆಗೆ ಹೋಗಿ ಶೋಧಕಾರ್ಯ ನಡೆಸಿದೆವು. ಆಗ ಮಗುವಿನ ಮೃತದೇಹವು ನೀರು ತುಂಬಿದ 50 ಲೀಟರ್ ಡ್ರಮ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಕಳೆದುಕೊಂಡ ನಂತರವೂ ಸರಿತಾ ಶಾಂತವಾಗಿ ಕುಳಿತಿದ್ದಳು. ಇದನ್ನು ನೋಡಿದ ಪೊಲೀಸರಿಗೆ ಸರಿತಾ ವರ್ತನೆಯ ಮೇಲೆ ಅನುಮಾನ ಬಂದಿದೆ. ಇತ್ತ ಹೆಣ್ಣು ಮಗು ಹುಟ್ಟಿದ ನಂತರ ಸರಿತಾ ಸಂತೋಷವಾಗಿರಲಿಲ್ಲ ಮತ್ತು ತನಗೆ ಗಂಡು ಮಗು ಬೇಕು ಅಂತ ಹೇಳುತ್ತಿದ್ದಳು ಎಂದು ಅತ್ತೆ-ಮಾವ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನಡೆದ ಘಟನೆ ಬೆಳಕಿಗೆ ಬಂದಿದೆ.