– ಬಾಲಕಿಯ ಕುಟುಂಬದೊಂದಿಗೆ ಪರಿಚಯವಿದ್ದವನಿಂದಲೇ ಕೃತ್ಯ
ಲಕ್ನೋ: 14 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾಮುಕ ಆಟೋ ಚಾಲಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿಯ ಕುಟುಂಬ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಫುಡ್ ಸ್ಟಾಲ್ ಇಟ್ಟುಕೊಂಡಿದೆ. ಆರೋಪಿ ಪ್ರತಿ ನಿತ್ಯ ಫುಡ್ ಸ್ಟಾಲ್‍ಗೆ ಆಗಮಿಸುತ್ತಿದ್ದ. ಘಟನೆ ನಡೆದ ದಿನ ಬಾಲಕಿ ಫುಡ್ ಸ್ಟಾಲ್‍ಗೆ ಸಾಮಗ್ರಿಗಳನ್ನು ತರಲು ಮಾರ್ಕೆಟ್‍ಗೆ ತೆರಳಿದ್ದಳು. ಈ ವೇಳೆ ಆರೋಪಿ ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆ ನಂತರ ಯಾರಿಗೂ ಹೇಳದಂತೆ 21 ವರ್ಷದ ಆರೋಪಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.
ನಿರ್ಜನ ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಘಟನೆ ಬಳಿಕ ಆರೋಪಿ ಬಾಲಕಿಯನ್ನು ತೇಹ್ಸಿಲ್ ಬಳಿ ಬಿಟ್ಟಿದ್ದಾನೆ. ಘಟನೆ ಬಳಿಕ ಬಾಲಕಿ ಈ ವಿಚಾರವನ್ನು ಮನೆಯವರಿಗೆ ಹೇಳಿರಲಿಲ್ಲ. ಆದರೆ ತುಂಬಾ ಗಾಬರಿಯಾಗಿದ್ದಳು, ಹೆಚ್ಚು ಮಾತನಾಡುತ್ತಿರಲಿಲ್ಲ. ಒತ್ತಾಯ ಮಾಡಿ ಕೇಳಿದ ಬಳಿಕ ಐದಾರು ಗಂಟೆಗಳ ಕಾಲ ನಡೆದ ಘಟನೆ ಬಗ್ಗೆ ವಿವರಿಸಿದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮುರದಾಬಾದ್ ಸಿವಿಲ್ ಲೈನ್ಸ್ ಎಸ್‍ಎಚ್‍ಒ ಯೋಗೇಂದ್ರ ಕೃಷ್ಣ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗೆ ಬಾಲಕಿಯ ಕುಟುಂಬ ಪರಿಚಯವಿದೆ. ಆರೋಪಿ ಫುಡ್ ಸ್ಟಾಲ್‍ಗೆ ಪ್ರತಿ ದಿನ ಭೇಟಿ ನೀಡುತ್ತಿದ್ದ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 363(ಅಪಹರಣ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದು, ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.