– 42 ಪುಟಗಳ ಎಫ್‍ಐಆರ್ ದಾಖಲೆ
ಹೈದರಾಬಾದ್: ಕಳೆದ ಹಲವು ವರ್ಷಗಳಿಂದ 139 ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 25 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಗೆ 2010ರಲ್ಲಿ ಮದುವೆಯಾಗಿತ್ತು. ಆದರೆ ಒಂದು ವರ್ಷದೊಳಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ತನ್ನ ಮಾಜಿ ಪತಿಯ ಕೆಲವು ಕುಟುಂಬ ಸದಸ್ಯರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ನಂತರ ಪೊಲೀಸರು ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಈ ಕುರಿತು 42 ಪುಟಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸದ್ಯಕ್ಕೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ದೂರಿನ ನಂತರ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಮಹಿಳೆಯ ಪ್ರಕಾರ, ಕಳೆದ ಹಲವಾರು ವರ್ಷಗಳಿಂದ 139 ಜನರು ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಬೆದರಿಕೆ ಮತ್ತು ಶೋಷಣೆಗೆ ಒಳಗಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯ ಮತ್ತು ಆರೋಪಿಗಳ ಬೆದರಿಕೆಗಳಿಂದಾಗಿ ನಾನು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.