– ಯುದ್ಧದಿಂದ ನಮ್ಮ ದೈನದಿನ ಅವಶ್ಯಕತೆ ಮೇಲೆ ಪರಿಣಾಮ ಬೀರಿದೆ
– ಮೋದಿ ಮನ್ ಕಿ ಬಾತ್‌ನಲ್ಲಿ ಯುದ್ಧದ ಪರಿಣಾಮಗಳ ಬಗ್ಗೆ ಮಾತು
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಯುದ್ಧದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ದೇಶದ ಎಲ್ಲ ನಾಗರಿಕರು ಒಗ್ಗೂಡಬೇಕು. ರಾಜ್ಯ ಸರ್ಕಾರಗಳು ಜನತೆಗೆ ಏನೆಲ್ಲ ಸೂಚನೆ, ಮಾಹಿತಿಗಳನ್ನ ಕೊಟ್ಟಿವೆಯೋ ಅವುಗಳ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಇಡಬೇಕು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿದರು.
ತಮ್ಮ ಮನದ ಮಾತು (Mann ki Baat) ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು. ಇದೇ ವೇಳೆ ಜನರು ವದಂತಿಗಳಿಗೆ ಕಿವಿಗೊಡದಂತೆ ಕರೆ ನೀಡಿದರು. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ (Indians) ಸಾಧ್ಯವಾದ ಎಲ್ಲಾ ಸಹಾಯವನ್ನ ಒದಗಿಸಿರುವುದಕ್ಕೆ ಆ ದೇಶಗಳಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಪಶ್ಚಿಮ ಏಷ್ಯಾ ದೇಶಗಳಲ್ಲಿ ಕಳೆದ 1 ತಿಂಗಳಿಗೂ ಹೆಚ್ಚು ಕಾಲದಿಂದ ತೀವ್ರ ಯುದ್ಧ ನಡೆಯುತ್ತಿದೆ. ಇದು ನಿಶ್ಚಿತವಾಗಿಯೂ ಸವಾಲಿನ ಸಮಯ. ಇಡೀ ದೇಶದ ಜನತೆ ಒಂದಾದರೆ ಮಾತ್ರ ಈಗಿನ ಸಂಕಷ್ಟದಿಂದ ಹೊರಬರಲು ಸಾಧ್ಯ. ಇಂಥ ಸಂದರ್ಭದಲ್ಲೂ ಕೆಲವರು ರಾಜಕಾರಣ ಮಾಡ್ತಿರೋದು ಸರಿಯಲ್ಲ. ಇದರಲ್ಲಿ ರಾಜಕೀಯದ ಸ್ವಾರ್ಥಕ್ಕೆ ಜಾಗ ಕೊಡಬಾರದು ಎಂದು ತಿಳಿವಳಿಕೆ ನೀಡಿದರು.
140 ಕೋಟಿ ಜನಕ್ಕೆ ಸಂಬಂಧಿಸಿದ್ದು
ಇದು ದೇಶದ 140 ಕೋಟಿ ಜನರಿಗೂ ಸಂಬಂಧಿಸಿದ್ದು, ಇಂಥ ಸಂದರ್ಭದಲ್ಲೂ ಯಾರೆಲ್ಲ ವದಂತಿಗಳನ್ನು ಹಬ್ಬಿಸುತ್ತಿದ್ದಾರೋ, ಅವರು ದೇಶಕ್ಕೆ ದೊಡ್ಡ ನಷ್ಟ ಮಾಡ್ತಿದ್ದಾರೆ. ನಾವು ಎಲ್ಲರೂ ಒಂದಾಗಿ ಈ ಸವಾಲನ್ನು ಎದುರಿಸಬೇಕು. ಎಲ್ಲ ನಾಗರಿಕರು ಎಚ್ಚರಿಕೆಯಿಂದಿದ್ದು ವದಂತಿಗಳಿಗೆ ಬಲಿಯಾಗಬಾರದು. ರಾಜ್ಯ ಸರ್ಕಾರಗಳು ಜನತೆಗೆ ಏನೆಲ್ಲ ಸೂಚನೆ, ಮಾಹಿತಿಗಳನ್ನ ಕೊಟ್ಟಿವೆಯೋ ಅವುಗಳ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಇಡಬೇಕು. ಈಗಿನ ಕಠಿಣ ಸ್ಥಿತಿಯನ್ನೂ ನಾವು ದಾಟುತ್ತೇವೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಜಗತ್ತಿನಲ್ಲೇ ಪೆಟ್ರೋಲ್, ಡೀಸೆಲ್ ಸಂಕಷ್ಟ ತಲೆದೋರಿದೆ
ಪ್ರಸಕ್ತ ಯುದ್ಧದ ಪರಿಣಾಮಗಳ ಕುರಿತು ಮಾತನಾಡಿದ ಮೋದಿ, ಮಾರ್ಚ್ ತಿಂಗಳು ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಇಡೀ ಜಗತ್ತು ಈ ಹಿಂದೆ ಕೋವಿಡ್ ಕಾಲದಲ್ಲಿ ಸುದೀರ್ಘ ಕಾಲ ಸಂಕಷ್ಟಕ್ಕೆ ಸಿಲುಕಿತ್ತು, ನಂತರ ಅದರಿಂದ ಹೊರಗೆ ಬಂತು. ಈಗ ನಮ್ಮ ನೆರೆಯ ದೇಶಗಳಲ್ಲಿ ಯುದ್ಧ ನಡೀತಿದೆ. ಯುದ್ಧ ನಡೀತಿರುವ ಕಾರಣ ನಮ್ಮ ದೈನದಿನ ಅವಶ್ಯಕತೆ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದ ಜಗತ್ತಿನಲ್ಲಿ ಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಸಂಕಷ್ಟದ ಸ್ಥಿತಿ ತಲೆದೋರಿದೆ. ಭಾರತ ಇಂಥ ಸಂಕಷ್ಟದ ಸ್ಥಿತಿಯನ್ನ ಸವಾಲಾಗಿ ನಿಂತು ಎದುರಿಸ್ತಿದೆ ಎಂದು ಮನದಟ್ಟು ಮಾಡಿದರು.

