ಕೌಲಾಲಂಪುರ: ಮಸೀದಿ ನಿರ್ಮಾಣಕ್ಕಾಗಿ ಕೌಲಾಲಂಪುರ ಹೃದಯಭಾಗದಲ್ಲಿರುವ 131 ವರ್ಷ ಹಳೆಯ ಹಿಂದೂ ದೇವಾಲಯವನ್ನು ಸ್ಥಳಾಂತರಿಸಲು ಮಲೇಷ್ಯಾ ಸರ್ಕಾರ ಮುಂದಾಗಿದೆ.
ಮಲಯ್ ಮೇಲ್ ವರದಿಯ ಪ್ರಕಾರ, ದೇವಿ ಶ್ರೀ ಪತ್ರಕಾಳಿಯಮ್ಮನ್ ದೇವಾಲಯವನ್ನು ಸ್ಥಳಾಂತರಿಸಲು ಸ್ಥಳವನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಆದರೆ, ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.
ಫೆಡರಲ್ ಸಂವಿಧಾನವು ಖಾತರಿಪಡಿಸುವ ಧಾರ್ಮಿಕ ಸ್ವಾತಂತ್ರ್ಯದ ತತ್ವಕ್ಕೆ ಅನುಗುಣವಾಗಿ ಕ್ರಮವಹಿಸಲಾಗುವುದು. ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ದೇವಾಲಯವನ್ನು ಕೆಡವಲಾಗುವುದಿಲ್ಲ ಎಂದು ದೃಢಪಡಿಸಲಾಗಿದೆ.
ಮಲೇಷಿಯನ್ನರ ಹಕ್ಕುಗಳ ಯುನೈಟೆಡ್ ಪಾರ್ಟಿ (URIMAI) ಅಧ್ಯಕ್ಷ ಪ್ರೊಫೆಸರ್ ರಾಮಸಾಮಿ ಪಳನಿಸಾಮಿ, ಈ ದೇವಾಲಯವು ಮಲೇಷ್ಯಾದ ಸ್ವಾತಂತ್ರ್ಯಕ್ಕೂ ಮುಂಚಿನ ಮಹತ್ವದ ಮತ್ತು ಧಾರ್ಮಿಕ ಹೆಗ್ಗುರುತಾಗಿದೆ. ದೇವಾಲಯವು ಸ್ಥಳಾಂತರಗೊಳ್ಳದಂತೆ ನೋಡಿಕೊಳ್ಳಲು DBKL ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಬಹು-ಜನಾಂಗೀಯ ಮತ್ತು ಬಹು-ಧರ್ಮೀಯ ಎಂದು ಹೆಮ್ಮೆಪಡುವ ರಾಷ್ಟ್ರದಲ್ಲಿ, ಬೇರೆ ಯಾವುದೇ ಉದ್ದೇಶಕ್ಕಾಗಿ ದೀರ್ಘಕಾಲದಿಂದ ಸ್ಥಾಪಿತವಾದ ಹಿಂದೂ ದೇವಾಲಯವನ್ನು ತೆಗೆದುಹಾಕುವುದು ಸ್ವೀಕಾರಾರ್ಹವಲ್ಲ ಎಂದು ಪೆನಾಂಗ್‌ನ ಮಾಜಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.