Cricket

13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ

Published

on

Share this

ಬೆಂಗಳೂರು:  13 ವರ್ಷಗಳ ಹಿಂದೆ ಈ ಅವಧಿಯಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ಯಾರು ನಿರ್ಮಿಸದ ಹೊಸ ದಾಖಲೆಯನ್ನು ಸೆಹ್ವಾಗ್ ಬರೆದಿದ್ದರು. ಮೊದಲ ಬಾರಿಗೆ ಕ್ರಿಕೆಟ್‍ನಲ್ಲಿ ಬದ್ಧ ವೈರಿ ಎಂದೇ ಪರಿಗಣಿಸಲಾಗಿರುವ ಪಾಕ್ ವಿರುದ್ಧ ತ್ರಿಶತಕ ಸಿಡಿಸಿ ಮುಲ್ತಾನಿನ ಸುಲ್ತಾನ ಎಂಬ ಗೌರವಕ್ಕೆ ವೀರೂ ಪಾತ್ರರಾಗಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪಾಕಿನ ಬೌಲರ್‍ಗಳನ್ನು ಬೆವರಿಳಿಸಿಬಿಟ್ಟಿದ್ದರು ಸೆಹ್ವಾಗ್. 531 ನಿಮಿಷಗಳ ಕಾಲ ಕ್ರಿಸ್‍ನಲ್ಲಿ ಸೆಹ್ವಾಗ್ ಎದುರಿಸಿದ್ದು 375 ಎಸೆತ. ಬಾರಿಸಿದ್ದು 39 ಬೌಂಡರಿ, 6 ಸಿಕ್ಸರ್, ಒಟ್ಟು ಹೊಡೆದದ್ದು 309 ರನ್.

ಟಾಸ್ ಗೆದ್ದ ದ್ರಾವಿಡ್ ಬ್ಯಾಟಿಂಗ್ ಆರಿಸಿಕೊಂಡರು. ಬ್ಯಾಟಿಂಗ್ ಆರಂಭಿಸಿದ ಸೆಹ್ವಾಗ್ ಆರಂಭದಲ್ಲಿ ನಿಧನವಾಗಿ ಆಡಲು ಆರಂಭಿಸಿ ನಂತರ ಎಂದಿನ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟ್‍ಗೆ ಅಕಾಶ್ ಚೋಪ್ರಾ ಜೊತೆಗೂಡಿ 39.4 ಓವರ್‍ಗಳಲ್ಲಿ 160 ರನ್ ಬಂತು.

ನಂತರ ಬಂದ ದ್ರಾವಿಡ್ 6ರನ್ ಗಳಿಸಿ ಬೇಗನೇ ಔಟಾದರೂ ಸಚಿನ್ ಬಂದ ಮೇಲೆ ಇಬ್ಬರ ಜುಗಲ್‍ಬಂದಿ ಜೋರಾಯಿತು. ಪಾಕ್ ಬೌಲರ್‍ಗಳ ಮೇಲೆ ಬೌಂಡರಿಗಳ ಮಳೆಯನ್ನೇ ಸುರಿಸಿದ ಸೆಹ್ವಾಗ್ 107 ಎಸೆತಗಳಲ್ಲಿ ಶತಕ ಸಿಡಿಸಿ, 222 ಎಸೆತಗಳಲ್ಲಿ 200 ರನ್ ಹೊಡೆದರು. ಸೆಹ್ವಾಗ್, ಸಚಿನ್ ಭರ್ಜರಿ ಆಟದಿಂದಾಗಿ ಮೊದಲ ದಿನದ ಅಂತ್ಯಕ್ಕೆ ಭಾರತದ ಸ್ಕೋರ್ 90 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್. ಸೆಹ್ವಾಗ್ 228 ರನ್ ಗಳಿಸಿದ್ದರೆ, ಸಚಿನ್ 60 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು.

ದ್ವಿಶತಕ ಸಿಡಿಸಿದ ಸೆಹ್ವಾಗ್ ತ್ರಿಶತಕ ಸಿಡಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಯಾಕೆಂದರೆ ಸೆಹ್ವಾಗ್ ಶತಕದ ಬಳಿಕ ಏಕದಿನ ಪಂದ್ಯದಂತೆ ಬ್ಯಾಟ್ ಬೀಸುತ್ತಿದ್ದರು. ಹೀಗಾಗಿ ತ್ರಿಶತಕ ಸಿಡಿಸುವುದು ಕಷ್ಟ ಎನ್ನುವ ಭಾವನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಸೆಹ್ವಾಗ್ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮಾರ್ಚ್ 29 ರಂದು ಸ್ಪಿನ್ನರ್ ಮುಷ್ತಾಕ್ ಎಸೆದ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಮೊದಲ ತ್ರಿಶತಕ ಸಿಡಿಸಿದರು. ಈ ಮೂಲಕ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಗೆ ಪಾತ್ರರಾದರು.

ಅಂತಿಮವಾಗಿ 309 ರನ್‍ಗಳಿಸಿದ್ದಾಗ ಸಮಿ ಎಸೆತದಲ್ಲಿ ತೌಫಿಕ್ ಉಮರ್‍ಗೆ ಕ್ಯಾಚ್ ನೀಡಿ ಸೆಹ್ವಾಗ್ ಔಟಾದರು. 375 ಎಸೆತಗಳನ್ನು ಎದುರಿಸಿದ ಈ ಅಮೋಘ ಇನ್ನಿಂಗ್ಸ್ ನಲ್ಲಿ 39 ಬೌಂಡರಿ, 6 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು. ಮೂರನೇ ವಿಕೆಟ್‍ಗೆ ಸೆಹ್ವಾಗ್ ಮತ್ತು ಸಚಿನ್ 83.5 ಓವರ್‍ಗಳಲ್ಲಿ 336 ರನ್‍ಗಳ ಜೊತೆಯಾಟವನ್ನು ಆಡುವ ಮೂಲಕ ಭಾರತದ ಇನ್ನಿಂಗ್ಸ್ 500 ರನ್‍ಗಳ ಗಡಿಯನ್ನು ದಾಟಿಸಿದ್ದರು.

ಈ ಟೆಸ್ಟ್‍ನಲ್ಲಿ ಸಚಿನ್ ಔಟಾಗದೇ 194 ರನ್, ಯುವರಾಜ್ 59 ರನ್ ಹೊಡೆದರು. ಅಂತಿಮವಾಗಿ ಭಾರತ 161.5 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 675 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಒಟ್ಟು 675 ರನ್‍ಗಳಲ್ಲಿ ಸೆಹ್ವಾಗ್ 509 ರನ್‍ಗಳವರೆಗೂ ಕ್ರೀಸ್‍ನಲ್ಲಿದ್ದು ವಿಶೇಷ.

ನಂತರ ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್‍ಗಳಿಗೆ ಆಲೌಟ್ ಆಗಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 206 ರನ್‍ಗಳಿಗೆ ಆಲೌಟ್ ಆಯ್ತು. ಪರಿಣಾಮ ಭಾರತ ಒಂದು ಇನ್ನಿಂಗ್ಸ್ ಮತ್ತು 52 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

5 ವರ್ಷಗಳ ಬಳಿಕ ಸರಣಿ: 1999ರ ಕಾರ್ಗಿಲ್ ಯುದ್ಧದ ಬಳಿಕ ಭಾರತ ಮತ್ತು ಪಾಕ್ ನಡುವೆ ಯಾವುದೇ ಸರಣಿ ನಡೆಯಲಿಲ್ಲ. ಆದರೆ 2004ರಲ್ಲಿ ಎರಡೂ ಕಡೆ ಮಾತುಕತೆಗಳು ಫಲಪ್ರದವಾಗಿ 5 ವರ್ಷಗಳ ಬಳಿಕ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಸರಣಿ ಆಡಲು ಬಂದಿಳಿತ್ತು. ಮೂರು ಟೆಸ್ಟ್ ಸರಣಿಯನ್ನು ಭಾರತ 2-1 ಅಂತರಗಳಿಂದ ಗೆದ್ದುಕೊಂಡಿತ್ತು.

ಸೆಹ್ವಾಗ್ ಇನ್ನಿಂಗ್ಸ್ ಹೀಗಿತ್ತು:
50 ರನ್ – 60 ಎಸೆತ, 9 ಬೌಂಡರಿ, 1 ಸಿಕ್ಸರ್
100 ರನ್ – 107 ಎಸೆತ, 14 ಬೌಂಡರಿ, 4 ಸಿಕ್ಸರ್
150 ರನ್ – 150 ಎಸೆತ, 20 ಬೌಂಡರಿ, 5 ಸಿಕ್ಸರ್
200 ರನ್ – 222 ಎಸೆತ, 26 ಬೌಂಡರಿ, 5 ಸಿಕ್ಸರ್
250 ರನ್ – 299 ಎಸೆತ, 32 ಬೌಂಡರಿ, 5 ಸಿಕ್ಸರ್
300 ರನ್ – 364 ಎಸೆತ, 38 ಬೌಂಡರಿ, 6 ಸಿಕ್ಸರ್
309 ರನ್ – 375 ಎಸೆತ, 39 ಬೌಂಡರಿ, 6 ಸಿಕ್ಸರ್

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications