ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ 13 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.
ಪ್ರೇಮಾಂಜಲಿ(13) ಮೃತ ದುರ್ದೈವಿ. ಈಕೆ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಾಕಿನಾಡದ ರಾಯವರಂ ನಿವಾಸಿ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಬುಧವಾರ ಪ್ರೇಮಾಂಜಲಿ ಗಂಟಲು ನೋವಿನಿಂದ ಬಳಲುತ್ತಿದ್ದಳು. ಗಂಟಲು ಸಮಸ್ಯೆಯಿಂದ ಎರಡು ದಿನಗಳ ಕಾಲ ಅನ್ನ, ನೀರು ಏನು ತಿನ್ನಲು ಆಗುತ್ತಿರಲಿಲ್ಲ. ಬಳಿಕ ಆಕೆಯ ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಆಕೆಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಮಾಡಿದ ಸ್ವಲ್ಪ ಸಮಯದ ಬಳಿಕ ಪ್ರೇಮಾಂಜಲಿಗೆ ವಾಂತಿ-ಭೇದಿ ಶುರುವಾಗಿದೆ. ಈ ವೇಳೆ ವೈದ್ಯರು ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೂ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.
ಪೋಷಕರು ವೈದ್ಯರ ವಿರುದ್ಧ ದೂರು ನೀಡಿದ್ದು, ಕಾಕಿನಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇತ್ತ ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.