ಚೆನ್ನೈ: ತನ್ನ ಮಾವನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮೆಟ್ರೋ ನೀರಿನ ಟ್ಯಾಂಕರ್ ಹರಿದು 13 ವರ್ಷದ ಬಾಲಕಿಯೊಬ್ಬಳು ದುರ್ಮರಣಕ್ಕೀಡಾದ ಘಟನೆ ಚೆನ್ನೈನಲ್ಲಿ ನಡೆದಿದೆ.
ಈ ಘಟನೆ ಚೆನ್ನೈನ ಕಿಲ್ಪಾಕ್ ಅವಡಿ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ಬಾಲಕಿಯನ್ನು ಜೆಮಿಮಾ ಅಚ್ಚು ಮ್ಯಾಥ್ಯು ಎಂದು ಗುರುತಿಸಲಾಗಿದೆ. ಈಕೆ ಯೂನಿಯನ್ ಕ್ರಿಶ್ಚಿಯನ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಅಲ್ಲದೇ ಈಕೆ ಡಾನ್ಸರ್ ಕೂಡ ಆಗಿದ್ದಳು.
Advertisement
ಜಿನೋ ಅಲೆಕ್ಸ್ ಅನ್ನೋರು ತಮ್ಮ ಮಗಳನ್ನು ಬೈಕಿನ ಮುಂದೆ ಕುಳ್ಳಿರಿಸಿಕೊಂಡಿದ್ದು, ಜೆಮಿಮಾ ಹಿಂದೆ ಕುಳಿತಿದ್ದಳು. ನ್ಯೂ ಅವಡಿ ರೋಡ್ ಹಾಗೂ ಕನಲಾ ರೋಡ್ ಜಂಕ್ಷನ್ ಬಳಿ ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್ ಚಾಲಕ ಒಂದೇ ಸಮನೆ ಹಾರ್ನ್ ಮಾಡುತ್ತಿದ್ದನು. ಚಾಲಕನ ಹಾರ್ನ್ ನಿಂದ ಕಿರಿಕಿರಿಯಾಗಿದ್ದರಿಂದ ಜಿನೋ ಟ್ಯಾಂಕರ್ ಗೆ ಮುಂದೆ ಚಲಿಸಲು ದಾರಿ ಮಾಡಿಕೊಟ್ಟರು. ಆದ್ರೆ ಈ ವೇಳೆ ಟ್ಯಾಂಕರ್, ಬೈಕ್ ಗೆ ಹಿಂಬದಿಯಿಂದ ಗುದ್ದಿದ್ದು, ಜಿನೋ ಹಾಗೂ ಅವರ ಮಗಳು ಎಡಗಡೆಗೆ ಬಿದ್ದರೆ ಜೆಮಿಮಾ ಬಲಗಡೆಗೆ ಬಿದ್ದಿದ್ದಾಳೆ. ಹೀಗಾಗಿ ಟ್ಯಾಂಕರ್ ಆಕೆಯ ಮೆಲೆಯೇ ಹರಿದಿದೆ. ಪರಿಣಾಮ ಟ್ಯಾಂಕರ್ ಚಕ್ರದಡಿ ಸಿಲುಕಿದ್ದಾಳೆ.
Advertisement
Advertisement
ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಜೆಮಿಮಾ ಬಲಗಡೆಗೆ ಬೀಳುತ್ತಿದ್ದಂತೆಯೇ ಆಕೆಯನ್ನ ರಕ್ಷಣೆ ಮಾಡಲು ಜಿನೋ ಪ್ರಯತ್ನಿಸಿದ್ದಾರೆ. ಆದ್ರೆ ಅದಾಗಲೇ ಆಕೆಯ ಮೇಲೆ ಟ್ಯಾಂಕರ್ ಹರಿದಿದೆ ಅಂತ ಕುಟುಂಬದ ಸ್ನೇಹಿತರಾದ ರೋಶನ್ ಥೋಮಸ್ ಹೇಳಿದ್ದಾರೆ.
Advertisement
ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೆಮಿಮಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿದ್ದಾರೆ.
ಮೃತ ಜೆಮಿಮಾ ತಾಯಿ ಮತ್ತು ತನ್ನ ಮಾವನ ಜೊತೆ ವಾಸವಾಗಿದ್ದಳು. ಜೆಮಿಮಾ ತಂದೆ ಕೇರಳದಲ್ಲಿ ಉದ್ಯೋಗದಲ್ಲಿದ್ದ ಕಾರಣ ಅಲೆಕ್ಸ್ ಆಕೆಯನ್ನು ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.
ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆಯೇ ಚಾಲಕ ಟ್ಯಾಂಕರ್ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಟ್ಯಾಂಕರ್ ಚಾಲಕ 23 ವರ್ಷದ ಗೋವಿಂದರಾಜನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv