ಬೆಂಗಳೂರು: ಮೊಬೈಲ್ (Mobile) ಗೀಳಿಗೆ 13 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ.
ಧ್ರುವ ಆತ್ಮಹತ್ಯೆಗೆ ಶರಣಾದ ಬಾಲಕ. ಈತ 9 ವರ್ಷದ ತಂಗಿಯ ಮುಂದೆಯೇ ಉಡದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವು ಇಲ್ಲದೆ ತಂಗಿ ಸುಮ್ಮನೆ ನೋಡುತ್ತಿದ್ದಳು. ಇದನ್ನೂ ಓದಿ: Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ
ಧ್ರುವ ಮನೆಯವರ ಮಾತು ಕೇಳದೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳವಾರ ಪೋಷಕರು ಕೆಲಸಕ್ಕೆ ತೆರಳಿದ್ದರು. ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿದ್ದರು. ಆಗ ಬಾಲಕ ಪ್ಯಾಂಟ್ ತೆಗೆದು ಸೊಂಟದ ಉಡದಾರ ಫ್ಯಾನ್‌ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಜೆ 7 ಗಂಟೆಯ ಸುಮಾರಿಗೆ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಅಣ್ಣ ಏನು ಮಾಡಿಕೊಳ್ಳುತ್ತಿದ್ದಾನೆ ಎಂಬ ಅರಿವು ಇಲ್ಲದೇ ತಂಗಿ ಸುಮ್ಮನೆ ನೋಡುತ್ತಿದ್ದಳು. ಬಾಲಕ ಕೆಳಗೆ ಬಿದ್ದ ಸಮಯಕ್ಕೆ ಕೆಲಸ ಮುಗಿಸಿ ತಾಯಿ ಬಂದಿದ್ದಾರೆ. ಘಟನೆ ನೋಡಿ ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್ ಜಪ್ತಿ
ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡುತ್ತಿದ್ದು, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕ ಅತಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಇದೇ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವು