ಕೋರ್ಟ್ ಮೆಟ್ಟಿಲೇರಿದ್ವು ಶೂ ಬಾಕ್ಸಿನಲ್ಲಿದ್ದ 13 ಗಿಳಿಗಳು

Public TV
1 Min Read
parrots 2

ನವದೆಹಲಿ: ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವಿಚಿತ್ರ ಪ್ರಕರಣಕ್ಕೆ ಸಂಬಂಧ ಪಟ್ಟ 13 ಗಿಳಿಗಳನ್ನು ನ್ಯಾಯಾಲಯದ ಮುಂದೆ ಬುಧವಾರ ಹಾಜರು ಪಡಿಸಲಾಯಿತು.

ಈ ಸುದ್ದಿ ಕೇಳಿದ ತಕ್ಷಣ ಪಾಪ ಆ ಮುಗ್ಧ ಪಕ್ಷಿಗಳು ಏನು ತಪ್ಪು ಮಾಡಿತ್ತು? ಅವುಗಳನ್ನು ನ್ಯಾಯಾಲಯಕ್ಕೆ ಯಾಕೆ ಕರೆದೊಯ್ದರು ಅಂತ ಹಲವು ಪ್ರಶ್ನೆ ಕಾಡುತ್ತೆ. ಅಚ್ಚರಿ ಕೂಡ ಆಗುತ್ತೆ. ಆದರೆ ನ್ಯಾಯಾಲಯಕ್ಕೆ ಅವುಗಳನ್ನು ಕರೆದಂದಿದ್ದು ಅವುಗಳ ತಪ್ಪಿಗಲ್ಲ, ಬದಲಾಗಿ ಅವನ್ನು ಕದ್ದೊಯ್ಯುತ್ತಿದ್ದ ಆರೋಪಿಯಿಂದಾಗಿ ಈ ಗಿಳಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.

parrots

ವನ್ಯಜೀವಿ ಕಾಯ್ದೆಯ ಅನ್ವಯ ಗಿಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಭಾರತದಿಂದ 13 ಜೀವಂತ ಗಿಳಿಗಳನ್ನು ಆರೋಪಿ ಅನ್ವರ್ಜೋನ್ ರಾಖಮತ್ಜೊನೊವ್ ಶೂ ಪೆಟ್ಟಿಗೆಗಳಲ್ಲಿ ಇರಿಸಿ ವಿದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ್ದನು. ಈ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಆತನನ್ನು ಬಂಧಿಸಿದ್ದರು. ಆಗ ಆತನ ಬಳಿಯಿದ್ದ ಗಿಳಿಗಳನ್ನು ಸಿಐಎಸ್‍ಎಫ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು.

ಗಿಳಿಗಳನ್ನು ಕಳ್ಳ ಸಾಗಾಣಿಕೆ ಮಾಡುವ ಆರೋಪಿ ವಿರುದ್ಧ ಕಸ್ಟಮ್ಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಕಾನೂನಿನ ಪ್ರಕಾರ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ನಡೆದರೂ ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದ ಗಿಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗಿಳಿಗಳು ಜೀವಂತವಾಗಿದ್ದ ಕಾರಣಕ್ಕೆ ಅವುಗಳನ್ನು ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕಾಗಿ ನ್ಯಾಯಾಲಯಕ್ಕೆ ಕರೆತರಲಾಯಿತು ಎಂದು ಕಸ್ಟಮ್ಸ್ ವಕೀಲ ಪಿಸಿ ಶರ್ಮಾ ತಿಳಿಸಿದರು.

ಗಿಳಿಗಳ ಜೊತೆ ಆರೋಪಿಯನ್ನು ಕೂಡ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆತ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ವಜಾಗೊಳಿಸಿದ್ದು ಅಕ್ಟೋಬರ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸದ್ಯ ವಶಪಡಿಸಿಕೊಂಡಿದ್ದ ಎಲ್ಲಾ ಗಿಳಿಗಳನ್ನು ಓಖ್ಲಾ ಪಕ್ಷಿಧಾಮಕ್ಕೆ ಕಳುಹಿಸುವಂತೆ ನ್ಯಾಯಾಧೀಶರು ಸೂಚಿಸಿದ್ದು, ಪಕ್ಷಿಗಳನ್ನು ಸುರಕ್ಷಿತವಾಗಿ ಪಕ್ಷಿಧಾಮಕ್ಕೆ ಬಿಟ್ಟು ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *