ಕೊಡಗು: ಐದು ಜಿಲ್ಲೆಗಳಲ್ಲಿ 10 ದರೋಡೆ ಮಾಡಿದ್ದ ಅಂತರ್ ಜಿಲ್ಲೆ ದರೋಡೆಕೋರರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದು, ಕೇವಲ 13 ದಿನಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 17ರಂದು ನಡೆದ ಹೆಬ್ಬಾಲೆಯ ಎಆರ್ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ 5 ಜಿಲ್ಲೆಗಳ 10 ಪ್ರಕರಣಗಳು ಬಯಲಿಗೆ ಬಂದಿದ್ದು, ಅಂತರ್ ಜಿಲ್ಲೆ ಸುಲಿಗೆಕೋರರ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಮನಗರ, ಹಾಸನ, ಮೈಸೂರು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಸುಲಿಗೆಕೋರರು ಪರಾರಿಯಾಗುತ್ತಿದ್ದರು. ಐಪಿಸಿ ಸೆಕ್ಷನ್ 420, 394, 427 ಅಡಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ಫೂಟೇಜ್, ಬೆರಳಚ್ಚಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಾಮನಗರದ ಪ್ರವೀಣ್(25), ಹಾಸನದ ಗಣೇಶ್(30), ಮೈಸೂರಿನ ಕುಮಾರ್(33) ಮತ್ತು ಅಭಿಷೇಕ್(23) ಎಂದು ಗುರುತಿಸಲಾಗಿದೆ.
Advertisement
Advertisement
ಒಂಟಿ ಮನೆ, ಪೆಟ್ರೋಲ್ ಬಂಕ್‍ಗಳೇ ಇವರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ರಾಮನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗಿನಲ್ಲಿ ಈ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಾಗಿವೆ. ಬಂಧಿತರಿಂದ ಒಟ್ಟು 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ಬೈಕ್, 2 ಲಾಂಗ್, 10ಕ್ಕೂ ಅಧಿಕ ಮೊಬೈಲ್, ಟಿವಿ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರವೀಣ್ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಈ ಹಿಂದೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 13 ದಿನಗಳಲ್ಲಿ ಕೊಡಗು ಪೊಲೀಸರು ಪ್ರಕರಣ ಬೇಧಿಸಿದ್ದು, ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ಅವರು ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.