ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೆಂಧರ್-ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ 13 ಭಯೋತ್ಪಾದಕರು ಭಾರತ ಸೈನಿಕರು ಎನ್‍ಕೌಂಟರ್ ಮಾಡಿದ್ದಾರೆ.
ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಸೋಮವಾರ ಬೆಳಗ್ಗೆ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹತ್ಯೆಗೈಯಲಾಗಿತ್ತು. ಬಳಿಕ ಅಂದ್ರೆ ಸಂಜೆ ವೇಳೆ ಜಮ್ಮು ವಿಭಾಗದ ನಿಯಂತ್ರಣ ರೇಖೆಯ ಉದ್ದಕ್ಕೂ ಮೆಂಧರ್‌ನಲ್ಲಿ ಸೇನಾ ಪಡೆ ನಡೆಸಿದ ದಾಳಿಯಲ್ಲಿ 10 ಜನ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರು ಮೇ 28ರಿಂದ ಪ್ರತಿ-ಒಳನುಸುಳುವಿಕೆ ಪ್ರಾರಂಭಿಸಿದ್ದರು. ಇದರಿಂದಾಗಿ ಭಾರತೀಯ ಸೇನೆಯು ಮೆಂಧರ್ ಸೆಕ್ಟರ್ ನಲ್ಲಿನ ಎಲ್‍ಒಸಿ ಉದ್ದಕ್ಕೂ ಹೈ ಅಲರ್ಟ್ ಆಗಿತ್ತು. ನಿರಂತರ ಕಾರ್ಯಾಚರಣೆಯಲ್ಲಿ ಕನಿಷ್ಠ ಹತ್ತು ಉಗ್ರರನ್ನು ಮಟ್ಟ ಹಾಕಲಾಗಿದೆ. ಪೂಂಚ್ ಜಿಲ್ಲೆಯ ಹಳ್ಳಿಗಳಲ್ಲಿ ಅಡಗಿರುವ ಉಗ್ರರಿಗೆ ಶೋಧ ನಡೆದಿ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರು ಮೇ 28ರಂದು ನೌಶೇರಾದ ಕಲಾಲ್ ಪ್ರದೇಶಕ್ಕೆ ನುಸುಳಲು ಪ್ರಯತ್ನ ನಡೆಸಿದ್ದರು. ಆದರೆ ನಂತರದ ಪ್ರತಿ-ಒಳನುಸುಳುವಿಕೆ ಕಾರ್ಯಾಚರಣೆಯಲ್ಲಿ ಹತ್ಯೆಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರಿಂದ 2 ಎಕೆ ಅಟ್ಯಾಕ್ ರೈಫಲ್, ಅಮೆರಿಕ ನಿರ್ಮಿತ ಎಂ-16 ಎ2 ರೈಫಲ್, 9-ಎಂಎಂ ಚೈನೀಸ್ ಪಿಸ್ತೂಲ್, ಆರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್), ಐದು ಹ್ಯಾಂಡ್ ಗ್ರೆನೇಡ್ ಹಾಗೂ ಎರಡು ಚಾಕು ಸೇರಿದಂತೆ ಅನೇಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.