Connect with us

Latest

126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

Published

on

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಒಟ್ಟು 126 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಕಳೆದ ಮೂರೂವರೆ ವರ್ಷಗಳಲ್ಲಿ 400 ಉಗ್ರರು ಜಮ್ಮು ಕಾಶ್ಮೀರದಲ್ಲಿ ಒಳನುಸುಳಿದ್ದು ಅದರಲ್ಲಿ 126 ಉಗ್ರರನ್ನು ಹತ್ಯೆ ಮಾಡಿದ್ದರೆ, 27 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಇಂದು ರಾಜ್ಯಸಭೆಗೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಲಿಖಿತ ಉತ್ತರ ನೀಡಿದೆ.

2019ರಲ್ಲಿ ಜೂನ್‍ವರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಮೂಲಕ 16 ಉಗ್ರರನ್ನು ಬಂಧಿಸಲಾಗಿದೆ. 2018ರಲ್ಲಿ 24 ಮಂದಿಯನ್ನು, 2017ರಲ್ಲಿ 35 ಮತ್ತು 2016 ರಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ವಿದೇಶದಲ್ಲಿ ತಲೆ ಮರೆಸಿರುವ ಆರೋಪಿಗಳ ಬಂಧನಕ್ಕಾಗಿ 2019ರಲ್ಲಿ ಇಂಟರ್ ಪೋಲ್‍ಗೆ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ. ಅದರಲ್ಲಿ 32ಪ್ರಕಟವಾಗಿದೆ. 2016ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87 ಪ್ರಕಟವಾಗಿದೆ, 2017 ರಲ್ಲಿ 94 ನೋಟಿಸ್‍ಗಳಲ್ಲಿ 87 ಪ್ರಕಟವಾಗಿದೆ, 2018ರಲ್ಲಿ 123 ನೋಟಿಸ್‍ಗಳನ್ನು ಪೈಕಿ ಕೇವಲ 76 ನೋಟಿಸ್‍ಗಳನ್ನು ಪ್ರಕಟಗೊಂಡಿದೆ ಎಂದು ಹೇಳಿದೆ.

ಸೋಮವಾರ ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ, 2018 ರಲ್ಲಿ ಒಟ್ಟು 318 ಉಗ್ರರ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ 2017ರಲ್ಲಿ ನಡೆದಿದ್ದ ದಾಳಿಗೆ ಹೋಲಿಸಿದರೆ 2018ರಲ್ಲಿ ಉಗ್ರ ದಾಳಿ ಸಂಖ್ಯೆ 187 ಹೆಚ್ಚಾಗಿದೆ. ಆದರೆ 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 963 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಲೋಕಸಭೆಯಲ್ಲಿ ಮಂಗಳವಾ ಗೃಹ ಸಚಿವಾಲಯ ಉತ್ತರ ನೀಡಿದೆ.

2019ರಲ್ಲಿ ಭಾರತ ಹಲವಾರು ಉಗ್ರರ ದಾಳಿಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

Click to comment

Leave a Reply

Your email address will not be published. Required fields are marked *