– ಸೇನಾ ಕೇಂದ್ರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ
ಜೈಪುರ: ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ಅದರಲ್ಲೂ ಇರಾನ್‍ನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿರುವ ಸುಮಾರು 120 ಮಂದಿ ಭಾರತೀಯರನ್ನು ಇಂದು ದೇಶಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನದ ಮೂಲಕ ಇರಾನ್‍ನಲ್ಲಿ ಇರುವ 120 ಮಂದಿ ಭಾರತೀಯರನ್ನು ಇಂದು ರಾಜಸ್ಥಾನದ ಜೈಸಲ್ಮರ್ ಗೆ ಕರೆತರಲಾಗುತ್ತಿದೆ. ಅಲ್ಲದೇ ಅವರಿಗೆ ಸೇನಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಈ ಬಗ್ಗೆ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಅವರು ಪ್ರತಿಕ್ರಿಯಿಸಿ, ದಕ್ಷಿಣ ಕಮಾಂಡರ್ ಅವರ ರಕ್ಷಣೆಯಲ್ಲಿ ಭಾರತೀಯ ಸೇನಾ ಕೇಂದ್ರಗಳಲ್ಲಿ ಇರಾನ್‍ನಿಂದ ಬಂದ ಭಾರತೀಯರನ್ನು ಕೆಲ ದಿನಗಳ ಕಾಲ ಇರಿಸಲಾಗುತ್ತದೆ. ಇರಾನ್‍ನಿಂದ ವಾಪಸ್ ಬಂದ ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆಯಾ ಎಂದು ತಿಳಿಯಲು ವಿಮಾನ ನಿಲ್ದಾಣದಲ್ಲೇ ಆರಂಭಿಕ ಹಂತದ ತಪಾಸಣೆ ಮಾಡಿ, ಬಳಿಕ ಜೈಸಲ್ಮರ್ ನಲ್ಲಿರುವ ಸೇನಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಇಂದು 120 ಮಂದಿ ಭಾರತೀಯರನ್ನು ಇರಾನ್‍ನಿಂದ ಕರೆತರಲಾಗುತ್ತಿದೆ. ಮಾರ್ಚ್ 15ರಂದು ಸುಮಾರು 250 ಭಾರತೀಯರನ್ನು ಇರಾನ್‍ನಿಂದ ಕರೆತರಲಾಗುವುದು. ಅವರನ್ನು ಕೂಡ ತಪಾಸಣೆಗೆ ಒಳಪಡಿಸಿದ ಬಳಿಕ ಜೈಸಲ್ಮರ್ ನ ಸೇನಾ ಕೇಂದ್ರದಲ್ಲಿಯೇ ಇರಿಸಲಾಗುವುದು ಎಂದರು.
ಕೊರೊನಾ ಪೀಡಿತ ದೇಶದಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ರಾಷ್ಟ್ರಕ್ಕೆ ವಾಪಾಸ್ ಕರೆತರಲು ಭಾರತೀಯ ಸೇನೆ ಸಿದ್ಧವಿದೆ. ಈಗಾಗಲೇ 7 ಸೇನಾ ಕೇಂದ್ರಗಳನ್ನು ಕೊರೊನಾ ವೈರಸ್ ರೋಗಿಗಳಿಗೆ ಸ್ಥಾಪಿಸಿದ್ದು, ಜೈಸಲ್ಮರ್, ಸೂರತ್ ಗದ್, ಜಾನ್ಸಿ, ಜೋಧ್ ಪುರ್, ದಿಯೊಲಾಲಿ, ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಈ ಸೇನಾ ಕೇಂದ್ರಗಳಿವೆ. ಅವುಗಳಲ್ಲಿ ವಿದೇಶಗಳಿಂದ ಬರುವ ಭಾರತೀಯರನ್ನು ಇರಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಇರುವ ಇನ್ನಷ್ಟು ಭಾರತೀಯರನ್ನು ರಾಷ್ಟ್ರ ಕರೆತರುವ ನಿರೀಕ್ಷೆಯಿದೆ. ಹೀಗೆ ಭಾರತಕ್ಕೆ ಬಂದವರಿಗೆ ವಾಸ್ತವ್ಯ ವ್ಯವಸ್ಥೆಯನ್ನು ತಕ್ಷಣವೇ ರಕ್ಷಣಾ ಇಲಾಖೆ ಮಾಡಿಕೊಡುತ್ತದೆ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.
ಸದ್ಯ ಇರಾನ್‍ನಲ್ಲಿ ಕೊರೊನಾ ಸೋಂಕು ತಗುಲಿ 1,016 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 75 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 4 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ ಓರ್ವನನ್ನು ಕೊರೊನಾ ಬಲಿ ಪಡೆದಿದೆ. ಇತ್ತ ಇಟಲಿ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಒಟ್ಟು 15,113 ಮಂದಿಗೆ ಸೋಕು ತಗುಲಿದ್ದು, ಚೀನಾದಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದು, 3,117 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದಾದ್ಯಂತ 1,34,769 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೇ ಈವರೆಗೆ ವಿಶ್ವದೆಲ್ಲೆಡೆ 4,983 ಮಂದಿಯನ್ನು ಮಹಾಮಾರಿ ಕೊರೊನಾ ಬಲಿಪಡೆದಿದ್ದರೆ, 70,387 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.