ಚಿಕ್ಕಮಗಳೂರು: ಸಂಬಂಧಿಗಳೇ 9 ತಿಂಗಳ ಮಗುವನ್ನು ಕದ್ದು ಮತ್ತೊಬ್ಬರಿಗೆ ಮಾರಿದ್ದ ಪ್ರಕರಣವನ್ನು ಜಿಲ್ಲೆಯ ಅಜ್ಜಂಪುರ ಪೊಲೀಸರು 12 ದಿನಗಳ ಕಾಲ ಮಾರುವೇಷದಲ್ಲಿ ಸುತ್ತಾಡಿ ಮಗುವನ್ನು ಪತ್ತೆಹಚ್ಚಿದ್ದಾರೆ.
ಕಳೆದ ಹತ್ತನ್ನೆರಡು ದಿನಗಳ ಹಿಂದೆ ಅಜ್ಜಂಪುರ ತಾಲೂಕಿನ ಬಾಳಯ್ಯನ ಹೊಸೂರು ಗ್ರಾಮದ ಪ್ರೇಮ-ರಾಜು ದಂಪತಿಯ ಮಗುವಿಗೆ ಕಿವಿ ಚುಚ್ಚಿಸಲು ಅಜ್ಜಂಪುರಕ್ಕೆ ಬಂದಿದ್ದರು. ಈ ವೇಳೆ ಇವರ ಜೊತೆ ದೂರದ ಸಂಬಂಧಿಗಳು ಆಗಿದ್ದ ಹಾಸನ ಜಿಲ್ಲೆ ಅರಸೀಕರೆ ತಾಲೂಕಿನ ಯಾದಪುರದ ಪ್ರದೀಪ್ ಹಾಗೂ ಆನಂದ್ ಕೂಡ ಇದ್ದರು.
Advertisement
Advertisement
ಮಗುವಿಗೆ ಕಿವಿ ಚುಚ್ಚಿಸಿ ಬಂದ ಬಳಿಕ ಅಮ್ಮ ಶೌಚಾಯಲಯಕ್ಕೆ ಹೋಗಿ ಬರುವಷ್ಟರಲ್ಲಿ ಮಗುವಿನ ಸಮೇತ ಇಬ್ಬರೂ ಆರೋಪಿಗಳು ಎಸ್ಕೇಪ್ ಆಗಿದ್ದರು. ಅಮ್ಮ-ಅಜ್ಜಿ ಕಣ್ಣೀರಾಕುತ್ತ ಇಡೀ ಊರನ್ನು ಹುಡುಕಿದರು ಮಗು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಸ್ವಾಮಿ 9 ತಿಂಗಳ ಮಗು ನೀವೇ ನಮ್ಮ ಪಾಲಿನ ದೇವರು, ದಯವಿಟ್ಟು ಮಗುವನ್ನು ಹುಡುಕಿಕೊಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದರು.
Advertisement
Advertisement
ಖಾಕಿ ಪಡೆಯ ಮಾರುವೇಶ: ಒಂಬತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆಂದು ತಿಳಿದ ಬಳಿಕ ಅಜ್ಜಂಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಮೂರ್ನಾಲ್ಕು ಸಿಬ್ಬಂದಿಗಳೊಂದಿಗೆ ಮಾರುವೇಶದಲ್ಲಿ ಅಜ್ಜಂಪುರ, ಬಾಣಾವರ, ಕಡೂರು, ಬೀರೂರು, ಚಿತ್ರದುರ್ಗ, ಅರಸೀಕೆರೆ ಅಂತ ಊರೂರು ಸುತ್ತಿದ್ದಾರೆ. ಕೊನೆಗೆ ಮಗು ಯಾದಪುರದಲ್ಲಿದೆ ಎಂಬ ಮಾಹಿತಿ ಆಧರಿಸಿ ಯಾದಪುರಕ್ಕೆ ಭೇಟಿ ಕೊಟ್ಟಾಗ ಮಗು ದೇವಸ್ಥಾನದ ಬಾಗಿಲಲ್ಲಿನಲ್ಲಿ ಸಿಕ್ಕಿದೆ. ಸದ್ಯ ಮಗುವನ್ನು ಅಮ್ಮನ ಮಡಿಲಿಗೆ ಸೇರಿಸಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಅಜ್ಜಂಪುರದಿಂದ ಕದ್ದ ಮಗುವನ್ನು ಆನಂದ್ ಹಾಗೂ ಪ್ರದೀಪ್ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಯಾದಪುರದ ದಂಪತಿಗೆ ಕೊಟ್ಟಿದ್ದರು. ಆ ದಂಪತಿಗೆ ಮದುವೆಯಾಗಿ ಎಂಟತ್ತು ವರ್ಷವಾದರೂ ಮಕ್ಕಳಿರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಮಗುವನ್ನು ಕೊಟ್ಟಿದ್ದರು. ಆದರೆ ಯಾವಾಗ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದಾರೆ ಎಂಬ ವಿಷಯ ತಿಳಿದ ಆನಂದ್-ಪ್ರದೀಪ್ ಮಗುವನ್ನು ಯಾದಾಪುರದ ದೇವಸ್ಥಾನದ ಬಾಗಿಲಲ್ಲಿ ಇಟ್ಟು ನಾಪತ್ತೆಯಾಗಿದ್ದಾರೆ.
ಸದ್ಯ ಪ್ರಕಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು ತನಿಖೆಗೆ ಇಳಿದಿದ್ದು, ಇದು ಮಕ್ಕಳ ಕಳ್ಳರ ದಂಧೆಯಾ ಎಂಬ ದೃಷ್ಠಿಯಲ್ಲಿ ತನಿಖೆ ಆರಂಭಿಸಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರೋ ಪ್ರದೀಪ್ ಹಾಗೂ ಆನಂದ್ಗಾಗಿ ಬಲೆ ಬೀಸಿದ್ದಾರೆ.