– ನನ್ನ ಕೆಲಸಕ್ಕೆ ತಕ್ಕ ಗೌರವ ಸಿಕ್ತಿಲ್ಲವೆಂಬ ನೋವಿದೆ
– ಸ್ವಕ್ಷೇತ್ರದಲ್ಲಿ 2 ದಿನಗಳ ಜನತಾದರ್ಶನ ಮುಗಿಸಿದ ಸಿಎಂ
ರಾಮನಗರ: 12 ವರ್ಷಗಳ ಹಿಂದೆ ಇದ್ದ ಶಕ್ತಿ ಈಗ ನನ್ನ ದೇಹದಲ್ಲಿಲ್ಲ. ವಯಸ್ಸಾಗುತ್ತಿದೆ, ಹೀಗಾಗಿ ಶಕ್ತಿ ಕುಂದುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಜನತಾದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕೆಲಸಕ್ಕೆ ತಕ್ಕ ಗೌರವ ಸಿಗುತ್ತಿಲ್ಲ ಎಂಬ ನೋವಿದೆ. ನನಗೆ ಸಮಯಾವಕಾಶ ಕೊಡಿ ನಿಮ್ಮ ಕೆಲಸ ಮಾಡಿಕೊಡುತ್ತೇವೆ ಎಂದು ಸ್ವಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು.
Advertisement
Advertisement
ಚನ್ನಪಟ್ಟಣದ ಗ್ರಾಮೀಣ ಅಭಿವೃದ್ಧಿಗೆ ಅಷ್ಟೇ ಅಲ್ಲ ನಗರದ ಅಭಿವೃದ್ಧಿಗೂ ಬದ್ಧನಾಗಿದ್ದೇನೆ. ಬಡ ಕುಟುಂಬದವರು ನಗರದಲ್ಲಿ ಮನೆಗಾಗಿ ಬೇಡಿಕೆ ಇಟ್ಟಿದ್ದೀರಿ. ಈ ನಿಟ್ಟಿನಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ನೀಡಲಾಗುವುದು. ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 60 ಕೋಟಿ ರೂ. ನೀಡುತ್ತೇನೆ. ಕುಡಿಯುವ ನೀರು ಪೂರೈಕೆಗಾಗಿ ರಾಮನಗರ, ಚನ್ನಪಟ್ಟಣಕ್ಕೆ ಪ್ರತ್ಯೇಕ ಪೈಪ್ ಲೈನ್ ವ್ಯವಸ್ಥೆ ಮಾಡಲಾಗುವುದು. ತಿರುಪತಿ ದೇವಾಲಯ ನಿರ್ಮಾಣಕ್ಕೆ ಜಾಗ ಹುಡುಕಲಾಗುತ್ತಿದೆ ಎಂದು ಜನತೆಗೆ ತಿಳಿಸಿದರು.
Advertisement
ಕೆರೆಗೆ ನೀರು ತುಂಬಿಸುವ ವಿವರವನ್ನ ತೆಗೆದುಕೊಂಡಿದ್ದೇನೆ. 2015ರಲ್ಲಿ ನಾನು ಕ್ಷೇತ್ರದ ಶಾಸಕನಾದ ಬಳಿಕ 86 ಕೆರೆಗೆ ಸಂಪೂರ್ಣವಾಗಿ ನೀರು ತುಂಬಿಸಿದ್ದೇವೆ. ಯಾಕೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತೀರಿ. ಕೆಲವರು ಸರ್ಕಾರ ಉರುಳಿಸಲು ಕಸರತ್ತು ನಡೆಸುತ್ತಿದ್ದಾರೆ. ಸರ್ಕಾರ ಬಹಳ ಬೇಗ ಹೋಗಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರವನ್ನು ಹೇಗೆ ನಡೆಸಬೇಕು ಅಂತ ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಗುಡುಗಿದರು.
Advertisement
ಸಿಎಂ ಅವರು ಸ್ವಕ್ಷೇತ್ರದಲ್ಲಿ ಕೈಗೊಂಡ ಎರಡು ದಿನಗಳ ಜನತಾದರ್ಶನವನ್ನು ಭಾನುವಾರ ಮುಗಿಸಿದ್ದಾರೆ. ಮೊದಲ ದಿನ ಅಕ್ಕೂರು, ಕೋಡಂಬಳ್ಳಿ ಹಾಗೂ ಹೊಂಗನೂರು ಜಿಲ್ಲಾ ಪಂಚಾಯ್ತಿಗಳಲ್ಲಿ ಜನತಾದರ್ಶನ ನಡೆಸಿದ್ದ ಸಿಎಂ, ಎರಡನೇ ದಿನಗ ಬೇವೂರು, ಮಳೂರು ಜಿಲ್ಲಾ ಪಂಚಾಯತ್ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ಜನತಾದರ್ಶನ ನಡೆಸಿದರು.
ಮೊದಲಿಗೆ ಬೇವೂರಿನಲ್ಲಿ ನಡೆದ ಜನತಾದರ್ಶನದಲ್ಲಿ ಕಳೆದ ಮೂರು ತಿಂಗಳ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ರಾಜು ಎಂಬವರ ಪತ್ನಿಗೆ ಬೆಸ್ಕಾಂ ಇಲಾಖೆಯ ವತಿಯಿಂದ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.
ಬೇವೂರು, ಬೈರಾಪಟ್ಟಣ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅಹವಾಲುಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರತಿ ಜನತಾದರ್ಶನದ ಸ್ಥಳಗಳಲ್ಲಿ ಸಾಲಮನ್ನಾ ಪಲಾನುಭವಿಗಳಿಗೆ ಋಣಮುಕ್ತ ಪತ್ರವನ್ನ ನೀಡಲಾಯಿತು. ಮೊದಲ ದಿನದಂತೆಯೇ ಕೆಲವರು ಸಿಎಂ ಎದುರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಕೆಲವರು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ ಸಿಎಂಗೆ ಮನವಿ ಪತ್ರ ನೀಡಿದರು.
ಮಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನದಲ್ಲಿ ಭೈರಾಪಟ್ಟಣ ಗ್ರಾಮದ ಎಂಬ ಪದ್ಮ ಎಂಬ ಮಹಿಳೆ ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜೊತೆ ಬಂದು ಸಿಎಂ ಎದುರು ಕಣ್ಣೀರು ಹಾಕಿದರು. ಮಗು ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ 5 ಲಕ್ಷ ರೂ. ತಗಲುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ ಎಂದು ಕಣ್ಣೀರು ಹಾಕಿದರು.
ಕೆಲವರಂತೂ ಸಿಎಂ ಕಾಲಿಗೆ ಎರಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ಮಧ್ಯೆ ಸಿಎಂ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬಳು ಕುಸಿದು ಬಿದ್ದರು. ಕಣ್ಣೆದುರೇ ನಡೆದ ಘಟನೆಯನ್ನು ನೋಡಿದ ಸಿಎಂ ಯಾಕಮ್ಮಾ, ಏನಾಯ್ತು, ಯಾರು ನೋಡ್ರಪ್ಪಾ, ಅವರಿಗೆ ನೀರು ಕುಡಿಸಿ, ಪಾಪಾ ಮಗುವನ್ನ ಎತ್ತಿಕೊಂಡಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು.