Connect with us

Districts

ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ವೃದ್ಧ ದೇವದಾಸಿಯರು!

Published

on

– ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ನಡೆದ ಶುಭವಿವಾಹ

ರಾಯಚೂರು: ಯವ್ವನದಲ್ಲಿ ಅನಿಷ್ಠ ಪದ್ದತಿಗೆ ಬಲಿಯಾಗಿ ದೇವದಾಸಿಯರಾಗಿ ಬದುಕಿದ 12 ಜನ ವೃದ್ಧೆಯರು ಈಗ ನವ ದಾಂಪತ್ಯಕ್ಕೆ ಕಾಲಿಟ್ಟು ಸಂಸಾರಸ್ಥರಾಗಿದ್ದಾರೆ. ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಳಿ ವಯಸ್ಸಿನ ದೇವದಾಸಿಯರಿಗೆ ಕಾನೂನುಬದ್ಧವಾಗಿ ಮದುವೆ ಮಾಡಲಾಯಿತು.

ಈಗಾಗಲೇ ತಮಗೆ ನೆಚ್ಚಿದವರ ಜೊತೆ ಸಂಸಾರ ಮಾಡುತ್ತಿರುವ ಮಹಿಳೆಯರಿಗೆ ಅವರ ಮದುವೆಯನ್ನು ನೋಂದಣಿ ಮಾಡಿಸುವ ಮೂಲಕ ಪುನಃ ವಿವಾಹ ಮಾಡಲಾಯಿತು. ಕಾರ್ಯಕ್ರಮದಲ್ಲಿ 59 ವರ್ಷದ ಹುಲಿಗೆಮ್ಮ, 63 ವರ್ಷದ ದಸ್ತಗಿರಿ ಸಾಬ್, ಜಾತಿ-ಧರ್ಮ ಬದಿಗೊತ್ತಿ ಸ್ವಯಂ ಪ್ರೇರಣೆಯಿಂದ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾದರು.

ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ದೇವದಾಸಿ ಪದ್ಧತಿಯಿಂದ ಹೊರಬರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ದೇವದಾಸಿ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇಳಿವಯಸ್ಸಿನಲ್ಲಿ ಜಾತಿ-ಧರ್ಮ ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ದೇವದಾಸಿ ವಿಮೋಚನಾ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಂಡು ಉನ್ನತ ಸಾಮಾಜಿಕ ಬದುಕನ್ನ ನಡೆಸುತ್ತಿರುವ ಜಿಲ್ಲೆಯ ನೂರಾರು ಜನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮಹಿಳೆಯರಿಗಾಗಿ ಓಟದ ಸ್ಪರ್ಧೆ, ಮ್ಯೂಸಿಕಲ್ ಚಯರ್, ನಿಂಬು ಚಮಚದ ಆಟಗಳನ್ನ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

Click to comment

Leave a Reply

Your email address will not be published. Required fields are marked *

www.publictv.in