ರಾಯ್‍ಪುರ್: ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಕನಿಷ್ಠ 12 ಮಾವೋವಾದಿಗಳು ಹತರಾಗಿದ್ದಾರೆ.
ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದುವರೆಗೆ 12 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ತಲೆಗೆ 25 ಲಕ್ಷ ಬಹುಮಾನ ಘೋಷಿಸಲ್ಪಟ್ಟ ನಾಯಕ ಸೇರಿ 29 ನಕ್ಸಲರು ಬಲಿ
ನಕ್ಸಲರ ವಿರುದ್ಧದ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಭದ್ರತಾ ಪಡೆ ನಕ್ಸಲ್ ವಿರುದ್ಧದ ಕಾರ್ಯಚರಣೆಯಲ್ಲಿ ಯಶಸ್ಸು ಸಾಧಿಸಿದೆ. ಇದಕ್ಕಾಗಿ ಭದ್ರತಾ ಪಡೆಗಳು ಮತ್ತು ಹಿರಿಯ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಛತ್ತೀಸ್‍ಗಢದಲ್ಲಿ ಮಾವೋವಾದಿಗಳಿಗೆ ಇದು ಮೂರನೇ ದೊಡ್ಡ ಹೊಡೆತವಾಗಿದೆ. ಏ.16 ರಂದು, ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಕನಿಷ್ಠ 29 ಮಾವೋವಾದಿಗಳು ಸಾವನ್ನಪ್ಪಿದ್ದರು. ಏ.30 ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮತ್ತೊಂದು ಎನ್‍ಕೌಂಟರ್‌ನಲ್ಲಿ 10 ಮಾವೋವಾದಿಗಳು ಹತರಾಗಿದ್ದರು.
ಈ ವರ್ಷ ಇದುವರೆಗೆ ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ 103 ಮಾವೋವಾದಿಗಳು ಹತರಾಗಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 9 ಮಂದಿ ನಕ್ಸಲರ ಹತ್ಯೆ