ನವದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ (Delhi Red Fort) ನ.10ರಂದು ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಬಳಕೆಯಾಗಿರುವ ಹುಂಡೈ ಐ20 ಕಾರಿನ ಬಗ್ಗೆ ಈಗಾಗಲೇ ಅನೇಕ ವಿಚಾರಗಳು ಹೊರಬಂದಿವೆ. ತನಿಖೆ ಚುರಕುಗೊಳಿಸಿರುವ ಭದ್ರತಾ ಸಂಸ್ಥೆಗಳು ಉಗ್ರರ ಬಗ್ಗೆಯೂ ಸ್ಫೋಟಕ ಮಾಹಿತಿಗಳನ್ನ ಕಲೆಹಾಕುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮೃತಪಟ್ಟ 12 ಜನರಲ್ಲಿ 2 ಶವಗಳು ಉಗ್ರರದ್ದೇ (Terrorists) ಇರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ.
ಹೌದು. ದೆಹಲಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಈಗಾಗಲೇ 8 ಮೃತದೇಹಗಳ ಗುರುತು ಪತ್ತೆಯಾಗಿದೆ. ಇದರಲ್ಲಿ 2 ದೇಹಗಳ ಗುರುತು ಪತ್ತೆಹಚ್ಚುವುದು ವಿಧಿವಿಜ್ಞಾನ ಪ್ರಯೋಗಾಲದ ತಂಡಕ್ಕೂ (FSL Team) ಸವಾಲಿನ ಕೆಲಸವಾಗಿದೆ. ಒಂದು ಶವದ ತಲೆ ಕಾಣೆಯಾಗಿದೆ, 2 ದೇಹಗಳು ಛಿದ್ರ ಛಿದ್ರವಾಗಿದ್ದು ಹೊಟ್ಟೆ, ತುಂಡಾದ ಬೆರಳುಗಳು, ಕಾಲುಗಳು ಸಿಕ್ಕಿವೆ. ಹೀಗಾಗಿ ಗುರುತು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ.
2 ದೇಹ ಉಗ್ರರದ್ದು; ಶಂಕೆ!
ಈವರೆಗೆ ಗುರುತು ಪತ್ತೆಯಾಗದ ಎರಡು ಮೃತದೇಹಗಳು ಉಗ್ರರದ್ದು ಅನ್ನೋ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಒಂದು ದೇಹ ಸ್ಫೋಟದ ರುವಾರಿ ಡಾ. ಉಮರ್ ಮೊಹಮ್ಮದ್‌ನದ್ದು ಇರಬಹುದು ಎಂದು ಶಂಕಿಸಲಾಗಿದೆ. ಅದಕ್ಕಾಗಿ ಈಗಾಗಲೇ ಡಾ. ಉಮರ್ ತಾಯಿಯ ಡಿಎನ್‌ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ತನಿಖಾ ಏಜೆನ್ಸಿಗಳು ಸ್ಥಳದಲ್ಲಿ ಪತ್ತೆಯಾದ ದೇಹದ ಅಂಗಾಂಗಗಳನ್ನ ಹೊಂದಿಸಿ ಗುರುತು ಪತ್ತೆಹಚ್ಚಲು ಹರಸಾಹಸ ನಡೆಸುತ್ತಿವೆ.
ಸ್ಫೋಟ ಸಂಭವಿಸಿದ ಸಮಯದಲ್ಲಿ ಹುಂಡೈ ಐ20 ಕಾರಿನಲ್ಲಿ ಮೂವರು ಇದ್ದರು ಎಂದು ಹೇಳಲಾಗಿತ್ತು. ಅಲ್ಲದೇ ಡಾ. ಉಮರ್ ಮೊಹಮ್ಮದ್ ಕಾರಿನಲ್ಲಿ ಇದ್ದದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು.
8 ಮಂದಿಯ ಗುರುತು ಪತ್ತೆ
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ 12 ಮಂದಿ ಪೈಕಿ 8 ಮಂದಿ ಗುರುತು ಪತ್ತೆಯಾಗಿದೆ. ಮೀರತ್ ನಿವಾಸಿ ಮೊಹ್ಸಿನ್, ಅನ್ರೋಹಾದ ಬಸ್ ಕಂಡಕ್ಟರ್ ಅಶೋಕ್ ಕುಮಾರ್, ಲೋಕೇಶ್, ಶ್ರಾವಸ್ತಿಯ ದಿನೇಶ್ ಮಿಶ್ರಾ, ಡ್ರೈವರ್ ಪಂಕಜ್, ಶ್ರೀನಿವಾಸಪುರಿಯ ಅಮರ್ ಕಟಾರಿಯಾ, ರಿಕ್ಷಾ ಚಾಲಕರಾದ ನೌಮನ್ ಅನ್ಸಾರಿ, ಮೊಹಮ್ಮದ್ ಜುಮ್ಮನ್ ಅನ್ನೋರ ಗುರುತು ಪತ್ತೆಯಾಗಿದೆ.
ಉಮರ್ ಅಸ್ತಿತ್ವ ಇನ್ನೂ ನಿಗೂಢ!
ಫರಿದಾಬಾದ್‌ನಲ್ಲಿ ಸುಮಾರು 2,900 ಕೆಜಿ ಸ್ಫೋಟಕಗಳು ಪತ್ತೆಯಾದ ಬಳಿಕ ಉಮರ್ ಮೊಹಮ್ಮದ್‌ಗಾಗಿ ಹರಿಯಾಣ ಹಾಗೂ ಜಮ್ಮು-ಕಾಶ್ಮೀರದ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಸ್ಫೋಟದ ಬಳಿಕ ಆತ ಜೀವಂತವಾಗಿದ್ದಾನೆಯೇ ಅಥವಾ ಸಾವನ್ನಪ್ಪಿದ್ದಾನೆಯೇ ಅನ್ನೋದು ಸದ್ಯ ನಿಗೂಢವಾಗಿದೆ. ಸದ್ಯ ಉಮರ್ ತಾಯಿಯ ಡಿಎನ್‌ಎ ಪರೀಕ್ಷಾ ವರದಿ ಬಂದ ಬಳಿಕ ಸತ್ಯ ತಿಳಿಯಲಿದೆ ಎಂದು ಎಫ್‌ಎಸ್‌ಎಲ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.



