ಪಾಟ್ನಾ: ಬಸ್ಸೊಂದು ಮೇಲ್ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಅನೇಕ ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಸಿತಾಮರ್ಹಿ ಯಲ್ಲಿ ನಡೆದಿದೆ.
ಈ ಅಪಘಾತ ಜಿಲ್ಲೆಯ ರನ್ನಿಸೈದ್ಪುರ ಪೊಲೀಸ್ ಠಾಣೆಯ ಪ್ರದೇಶದಲ್ಲಿ ಬರುವ ಭಾನಸ್ಪತ್ತಿ ಗ್ರಾಮದ ಸಮೀಪದ ರಾಷ್ಟ್ರಿಯ ಹೆದ್ದಾರಿ 77 ರಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
ಖಾಸಗಿ ಬಸ್ ಮುಜಫರ್ ಪುರ್ ಜಿಲ್ಲೆಯ ಅರೋಯ್ ನಿಂದ ಬೈರಿಯಾಗೆ ತೆರಳುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 77 ರ ಮೇಲ್ ಸೇತುವೆ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗಿದ್ದ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ. ಮತ್ತಿರುಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅಪಘಾತದ ನಂತರ ಬಸ್ ಪಲ್ಟಿ ಹೊಡೆದಿದ್ದು, ಬಸ್ ಕೆಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದು, ಸದ್ಯಕ್ಕೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿ ಶಿವಾನಾರಾಯಣ್ ರಾಮ್ ಹೇಳಿದ್ದಾರೆ.