ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇರಂಬಾಣೆ ಸಮೀಪದ ಕೊಳಗದಾಳು ಗ್ರಾಮದ ಸಂಜು ಎಂಬವರ ಮನೆಯ ಅಡುಗೆಮನೆಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ.
ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಅಕಸ್ಮಾತಾಗಿ ಮನೆಯೊಳಗೆ ಸೇರಿಕೊಂಡಿತ್ತು. ಇನ್ನು ಹಾವನ್ನು ಕಂಡ ಮನೆಯವರು ಜೀವ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಚಾರ ತಿಳಿದ ಸ್ನೇಕ್ ಶರತ್ ಮತ್ತು ತಂಡ ಒಂದು ಗಂಟೆಯ ಯಶಸ್ವಿ ಕಾರ್ಯಾಚರಣೆ ನಡೆಸಿ ಹಾವನ್ನ ರಕ್ಷಣೆ ಮಾಡಿದ್ದಾರೆ.
Advertisement
ಇದುವರೆಗೆ 16 ಕಾಳಿಂಗ ಸರ್ಪ, ಒಂದು ಬಿಳಿ ನಾಗರ ಹಾವು ಸೇರಿದಂತೆ 2500ಕ್ಕೂ ಹೆಚ್ಚು ಹಾವುಗಳನ್ನ ಸೆರೆಹಿಡಿದಿರೋ ಶರತ್, ಹಾವುಗಳನ್ನ ಕಂಡರೆ ಹೊಡಿಬೇಡಿ, ಕೊಲ್ಲಬೇಡಿ ಎಷ್ಟೊತ್ತಿಗಾದ್ರೂ ಸರಿ ಎಲ್ಲಿದ್ದರೂ ನನಗೆ ಕಾಲ್ ಮಾಡಿ. ಹಾವನ್ನ ನಾವು ರಕ್ಷಣೆ ಮಾಡ್ತೇವೆ ಎಂದು ಮನವಿ ಮಾಡಿದ್ದಾರೆ.
Advertisement
ಸುಮಾರು 12 ಅಡಿ ಉದ್ದದ 8 ಕೆ.ಜಿ ತೂಕದ ಈ ಭಾರೀ ಗಾತ್ರದ ಉರಗ ನೋಡಿದ ಕೂಡಲೇ ಬೆಚ್ಚಿಬೀಳಿಸುವಂತಿತ್ತು. ಬುಸುಗುಡುತ್ತಾ ಅಡುಗೆಮನೆಯಲ್ಲಿ ಅಡಗಿದ್ದ ಹಾವನ್ನ ಸೆರೆಹಿಡಿದ ಶರತ್, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಂದು ವಿರಾಜಪೇಟೆ ತಾಲೂಕಿನ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಡೋದಾಗಿ ತಿಳಿಸಿದ್ದಾರೆ.