ಮುಂಬೈ: ಸಂಗೀತ ತಂಡವೊಂದರ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬಸ್ ಪ್ರಪಾತಕ್ಕೆ (Gorge) ಉರುಳಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಪುಣೆಯಿಂದ (Pune) ಮುಂಬೈಗೆ (Mumbai) ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ (Shingroba temple) ದೇವಸ್ಥಾನದ ಬಳಿ ಮುಂಜಾನೆ 4.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ – ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ
ಬಾಜಿ ಪ್ರಭು ವಾಡಕ್ ಗ್ರೂಪ್‍ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‍ವಾಡ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವ್‍ಗೆ (Goregaon) ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್‍ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್‌ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ತಂಡ ಮತ್ತು ಚಾರಣಿಗರ ತಂಡ ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಖೋಪೋಲಿ (Khopoli) ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು