ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ.
ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ ಖರ್ಚು-ವೆಚ್ಚಗಳ ಬಗ್ಗೆ ಆರ್ ಟಿಐ ಅಡಿಯಲ್ಲಿ ಪ್ರಶ್ನಿಸಿದಾಗ ಈ ಸತ್ಯ ಹೊರಬಂದಿದೆ. ಉದ್ಯಾನವನದ ನಿರ್ವಹಣೆಗಾಗಿ ಇಷ್ಟೊಂದು ಹಣ ವೆಚ್ಚ ಮಾಡುವ ಅವಶ್ಯಕತೆ ಇದೆಯೇ ಎಂದು ಭೀಮಪ್ಪ ಗಡಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Advertisement
ಆರ್ ಟಿಐ ಅಡಿಯಲ್ಲಿ ರಾಷ್ಟ್ರಪತಿ ಭವನದಿಂದ ಪಡೆದಿರುವ ಮಾಹಿತಿಯನ್ನು ಗುರುವಾರ ಸುದ್ದಿಮಾಧ್ಯಮಗಳಿಗೆ ಭೀಮಪ್ಪ ಗಡಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅವರು, ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 12.70 ಕೋಟಿ ರೂ., ಹೂದೋಟ ಯಂತ್ರೋಪಕರಣಗಳ ಖರೀದಿಗಾಗಿ 1.46 ಕೋಟಿ ರೂ. ಹಾಗೂ ಉದ್ಯಾನವನ ಸಿಬ್ಬಂದಿಯವರ ವೇತನಕ್ಕಾಗಿ ಪ್ರತಿವರ್ಷ ಅಂದಾಜು 8.64 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಸುಮಾರು 20 ಕೋಟಿ ಉದ್ಯಾನವನ ನಿರ್ವಹಣೆಗೆ ಖರ್ಚಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಇಷ್ಟೊಂದು ಹಣ ವೆಚ್ಚ ಮಾಡಿ ಉದ್ಯಾನವನ ನಿರ್ವಹಣೆ ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಷ್ಟ್ರಪತಿಗಳ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
Advertisement
ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿಗೆ ಹಣ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಪಿಂಚಣಿ ಬಂದಿಲ್ಲವೆಂದು ವಯೋವೃದ್ಧರು, ವಿಧವೆಯರು ಧರಣಿ ಮಾಡುವುದು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.