ನವದೆಹಲಿ: ಅಮೆರಿಕದಲ್ಲಿರುವ ಭಾರತೀಯ ಅಕ್ರಮ ವಲಸಿಗರ (Indian Migrants) 2ನೇ ಹಂತದ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ. 119 ಮಂದಿ ಅಕ್ರಮ ವಲಸಿಗರನ್ನು ಹೊತ್ತಿರುವ ಅಮೆರಿಕದ (America) ವಿಮಾನ ಶನಿವಾರ ಪಂಜಾಬ್‌ನ (Punjab) ಅಮೃತಸರಕ್ಕೆ ಬಂದಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಬರುತ್ತಿರುವ ಅಕ್ರಮ ವಲಸಿಗರ ಪೈಕಿ 67 ಮಂದಿ ಪಂಜಾಬ್‌ನವರೇ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವಾಗಲೇ ಗಡಿಪಾರು ಪ್ರಕ್ರಿಯೆಯನ್ನು ಮುಂದುವರಿಸಿದೆ. ಇತ್ತೀಚೆಗಷ್ಟೇ 104 ಮಂದಿ ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕದಿಂದ ಭಾರತಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಜನರ ಕೈಗೆ ಕೋಳಗಳನ್ನು ತೊಡಿಸಿ ಕರೆತಂದಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಗಡಿಪಾರು ಪ್ರಕ್ರಿಯೆ ನಡೆಯುತ್ತಿದ್ದು ಫೆ.16ರಂದು 3ನೇ ತಂಡ ಭಾರತಕ್ಕೆ ಬಂದಿಳಿಯುವ ಸಾಧ್ಯತೆಗಳಿವೆ.
ಗಡಿಪಾರು ವಿಚಾರವಾಗಿ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ಕಾನೂನುಬಾಹಿರವಾಗಿ’ ವಾಸಿಸುವ ಭಾರತೀಯ ಪ್ರಜೆಗಳ ಕಾನೂನುಬದ್ಧ ಮರಳುವಿಕೆಗೆ ಭಾರತ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.