ಇನ್ಮುಂದೆ ಎಲ್ಲಾ ತುರ್ತು ಸೇವೆ ನೆರವಿಗೂ 112 ಡಯಲ್ ಮಾಡಿ!- ಹೇಗೆ ಕೆಲಸ ಮಾಡುತ್ತೆ?

Public TV
2 Min Read
112 helpline

ನವದೆಹಲಿ: ಇನ್ನು ಮುಂದೆ ಎಲ್ಲ ತುರ್ತು ಸೇವೆಗೆ ಒಂದೇ ನಂಬರ್ ಗೆ ಕರೆ ಮಾಡಬಹುದು. ಸುರಕ್ಷತೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ (ಇಆರ್ ಎಸ್‍ಎಸ್)ಗೆ ಏಕೈಕ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ.

ಹೌದು. ಮೊದಲೆಲ್ಲ ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು. ಆದ್ರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ವಿನೂತನ ತುರ್ತು ಸಹಾಯವಾಣಿ ಸಂಖ್ಯೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಸಹ ಡಯಲ್ ಮಾಡಿ ನೆರವು ಪಡೆಯಬಹುದಾಗಿದೆ.

ಸದ್ಯ ಒಟ್ಟು ದೇಶದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪುದುಚೇರಿ, ಲಕ್ಷದೀಪ, ಅಂಡಮಾನ್, ದಾದರ್ ನಗರ್ ಹವೇಲಿ, ದಿಯು ಮತ್ತು ದಮನ್‍ನಲ್ಲಿ ಸೇವೆ ಕಾರ್ಯರೂಪಕ್ಕೆ ಬರಲಿದೆ.

112 helpline 3

ಹೇಗೆ ಕೆಲಸ ಮಾಡುತ್ತೆ?
* ಸ್ಮಾರ್ಟ್ ಫೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಫೋನ್‍ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ.
* ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್‍ಎಸ್ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್‍ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್‍ಸಿಗೆ ಕಳುಹಿಸಬಹುದು.

* 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.
* ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
* 112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

* ಸದ್ಯ ತುರ್ತು ಸಹಾಯವಾಣಿ ಕರೆಗಳಿಗೆ ಸ್ಪಂದಿಸಿ ನೆರವು ನೀಡಲು ಈಗ 10-12 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಮುಂದಿನ 6-8 ತಿಂಗಳ ಒಳಗಡೆ 8 ನಿಮಿಷದಲ್ಲಿ ಕರೆಗೆ ಸ್ಪಂದನೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
* ಅಲ್ಲದೆ ಮಹಿಳೆಯರಿಗೆ ಇನ್ನಷ್ಟು ಸುರಕ್ಷತೆ ಒದಗಿಸುವ ಸಲುವಾಗಿ ದೇಶದಲ್ಲಿ ಒಟ್ಟು 8 ದೊಡ್ಡ ನಗರಗಳನ್ನು ಆರಿಸಿಕೊಂಡು ಅಲ್ಲಿ ಸುರಕ್ಷತಾ ನಗರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸುಮಾರು 2,919 ಕೋಟಿ ರೂ. ಹಣ ಮೀಸಲಿಡಲಾಗಿದೆ. ಅಹಮದಾಬಾದ್, ಚೆನ್ನೈ, ಬೆಂಗಳೂರು, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಲಕ್ನೋ, ಮುಂಬೈ ನಗರಗಳನ್ನು ಸುರಕ್ಷತಾ ನಗರ ಯೋಜನೆಗೆ ಆರಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *