ಪ್ರವಾಹ ನೀರಲ್ಲಿ ನಿಂತು ಪತ್ರ ಓದಿ ಕಾರಜೋಳರ ವಿರುದ್ಧ ಬಾಲಕಿಯ ಆಕ್ರೋಶ

Public TV
2 Min Read
bgk child letter 2

– ಒಂದು ರಸ್ತೆಯನ್ನು ಮಾಡದ ನೀವೆಂಥ ಜನಪ್ರತಿನಿಧಿಗಳು?
– ಭಾರೀ ಚರ್ಚೆಗೆ ಗ್ರಾಸವಾಯ್ತು ವಿಡಿಯೋ

ಬಾಗಲಕೋಟೆ: ಪ್ರವಾಹದ ನೀರಲ್ಲಿ ನಿಂತು ಪತ್ರದ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಬಾಲಕಿಯೊಬ್ಬಳು ಸವಾಲು ಹಾಕಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಬಾಲಕಿ ಅನ್ನಪೂರ್ಣ ಈ ಪತ್ರವನ್ನು ನೀರಿನಲ್ಲಿಯೇ ನಿಂತುಕೊಂಡು ಓದಿದ್ದಾಳೆ. ನಮ್ಮ ಗ್ರಾಮದ ರಸ್ತೆ ಜಲಾವೃತವಾಗಿವೆ. ಮೂರು ದಿನದಿಂದ ನೀರು ಹರಿದು ಬರುತ್ತಿದೆ. ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನೀವು ನಿಜವಾಗಿಯೂ ಜನಸೇವೆ ಮಾಡಲು ಪ್ರಮಾಣ ಮಾಡಿದ್ದರೆ ಹೀಗ್ಯಾಕೆ ಆಗುತಿತ್ತು. ಒಂದು ರಸ್ತೆಯನ್ನೂ ಮಾಡದಿದ್ದರೆ ನೀವ್ಯಾಕೆ ಜನಪ್ರತಿನಿಧಿಗಳಾಗಬೇಕು ಎಂದು ಬಾಲಕಿ ತರಾಟೆಗೆ ತೆಗೆದುಕೊಂಡಿದ್ದಾಳೆ.

vlcsnap 2019 10 22 15h47m52s087 e1571739576790

ಬಾಲಕಿ ಪತ್ರ ಓದುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮುಧೋಳ ರೈತರು, ಸಂತ್ರಸ್ತರು ಸಂಕಷ್ಟದಲ್ಲಿದ್ದರೆ, ಡಿಸಿಎಂ ಗೋವಿಂದ ಕಾರಜೋಳ ಬೆಂಗಳೂರಿನಲ್ಲಿದ್ದಾರೆ. ಮುಧೋಳ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ಘಟಪ್ರಭಾ ನದಿಯ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಮುಧೋಳ ತಾಲೂಕಿನಲ್ಲಿ 210 ಮನೆಗಳು ನೆಲಸಮವಾಗಿವೆ.

ಅಪಾರ ಪ್ರಮಾಣದ ಕಬ್ಬು, ಅರಿಶಿನ, ಈರುಳ್ಳಿ ಬೆಳೆಗಳು ಜಲಾವೃತವಾಗಿ ಹಾನಿಯಾಗಿವೆ. ಇದೀಗ ಮತ್ತೆ ಪ್ರವಾಹದಿಂದ ರೈತರು, ಸಂತ್ರಸ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಧೋಳ ತಾಲೂಕಿನಲ್ಲೇ ಅತೀ ಹೆಚ್ಚು ಮಳೆ ಹಾನಿಯಾಗಿದ್ದರೂ ಸಹ ಸ್ವಕ್ಷೇತ್ರದತ್ತ ಡಿಸಿಎಂ ಗೋವಿಂದ ಕಾರಜೋಳ ತಿರುಗಿಯೂ ನೋಡದ್ದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Bagalkot Rain A

ಬಾಲಕಿ ಹೇಳಿದ್ದೇನು?
ರನ್ನ ಬೆಳಗಲಿ ಪಟ್ಟಣದ ಮುಖ್ಯ ಅಧಿಕಾರಿಗಳು ಹಾಗೂ ಮುಧೋಳ ತಾಲೂಕಿನ ಹಾಲಿ ಶಾಸಕರಿಗೆ ಹಾಗೂ ಬೆಳಗಲಿ ಪಟ್ಟಣದ ಪಂಚಾಯ್ತಿ ಅಧಿಕಾರಿಗಳು, ಚೇರ್ಮನ್ ಹಾಗೂ ಸದಸ್ಯರು, 17ನೇ ವಾರ್ಡ್ ಸದಸ್ಯರಿಗೆ ತಿಳಿಸುವುದೇನೆಂದರೆ ನಮ್ಮ ಬೀದಿ, ರಸ್ತೆ ಜಲಾವೃತವಾಗಿದೆ. ಬೆಳಗಲಿಯಿಂದ ಚಿಮ್ಮಡ ರಸ್ತೆ ಹಾಳಾಗಿದೆ. 3 ದಿನಗಳಿಂದ ನೀರು ಸತತವಾಗಿ ಹರಿದು ಬರುತ್ತಿದೆ. ಯಾರೂ ಕೂಡ ಈ ರಸ್ತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀವು ನಿಜವಾಗಲು ಜನ ಸೇವೆ ಮಾಡಲು ಪ್ರಮಾಣ ಮಾಡಿದ್ದರೆ, ನೀವು ರಾಜಕಾರಣಿಗಳಾಗಿದ್ದರೆ ಒಂದು ರಸ್ತೆ ಕೂಡ ಮಾಡಲು ಆಗದವರು ನೀವ್ಯಾಕೆ ಯಾಕೆ ಜನಪ್ರತಿನಿಧಿಯಾಗಬೇಕು? ದಯವಿಟ್ಟು ಇದನ್ನ ಎಲ್ಲರಿಗೂ ಶೇರ್ ಮಾಡಿ, ಎಂಎಲ್‍ಎ ಅವರಿಗೆ ತಲುಪುವ ತನಕ ಶೇರ್ ಮಾಡಿ.

Share This Article
Leave a Comment

Leave a Reply

Your email address will not be published. Required fields are marked *