ರಾಮನಗರ: ಆಟವಾಡಲು ಹೋಗಿದ್ದ ಮಗುವೊಂದು ಮೋರಿಯಲ್ಲಿ ಬಿದ್ದು ದುರ್ಮರಣ ಹೊಂದಿರುವ ಘಟನೆ ರಾಮನಗರದ ಮೆಹಬೂಬ್ ನಗರದಲ್ಲಿ ನಡೆದಿದೆ.
11 ತಿಂಗಳ ಪುತ್ರ ಅರ್ಜಾನ್ ಮೃತಪಟ್ಟ ದುರ್ದೈವಿ. ರಾಮನಗರ 19 ನೇ ವಾರ್ಡ್ ಮೆಹಬೂಬ್ ನಗರದ ನಿವಾಸಿ ಕಲೀಂ ಖಾನ್ ಎಂಬುವವರ ಪುತ್ರನಾಗಿದ್ದು, ಜನವರಿ 11 ರಂದು ಮನೆಯ ಬಳಿ ಆಟವಾಡುತ್ತಿದ್ದ ಮಗು ಕಾಣೆಯಾಗಿತ್ತು.
ಮಗುವಿನ ಪೋಷಕರು ಜನವರಿ 11 ರಂದು ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ಸೋಮವಾರ ಬೆಳಿಗ್ಗೆ ಮನೆಯ ಮುಂದೆ ತೆರೆದ ಚರಂಡಿಯ ಬಳಿ ಕೊಳೆತ ವಾಸನೆ ಬಂದಾಗ ಪರಿಶೀಲಿಸಿ ನೋಡಿದಾಗ ಮೋರಿಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮಗು ಆಟವಾಡಲು ಮನೆಯ ಹೊರಗೆ ಮಗು ಬಂದಿದ್ದು, ಯಾರೂ ಗಮನ ಹರಿಸದ ಹಿನ್ನೆಲೆಯಲ್ಲಿ ಮಗು ಚರಂಡಿ ಕಡೆಗೆ ಹೋಗಿ ಬಿದ್ದಿದೆ. ತೆರೆದ ಚರಂಡಿಯಲ್ಲಿ ಮಣ್ಣು ಮಿಶ್ರಿತ ಕೊಚ್ಚೆ ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಮೆಹಬೂಬ್ ನಗರ ವಾರ್ಡ್ ನಲ್ಲಿ ನಗರಸಭೆಯವರು ಚರಂಡಿಗಳನ್ನು ಮುಚ್ಚದೆ ತೆರೆದಿರುವುದರಿಂದ ಈ ಘಟನೆ ನಡೆದಿದೆ. ಮೃತ ಬಾಲಕನ ಕುಟುಂಬ ಬಡವರಾಗಿದ್ದು, ಫಿಲೇಚರ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯರು ನಗರಸಭೆಯನ್ನು ಒತ್ತಾಯಿಸುತ್ತಿದ್ದಾರೆ.
ಈ ಘಟನೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.