ಏಕಾಏಕಿ 11 ಸಿಂಹಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

Public TV
1 Min Read
LION

ಅಹಮದಾಬಾದ್: ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ.

ಸಿಂಹಗಳ ರಾಜ್ಯವೆಂದೆ ಹೆಸರು ಪಡೆದುಕೊಂಡಿರುವ ಗುಜರಾತ್‍ನಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಿರ್ ಅರಣ್ಯ ಪ್ರದೇಶದ ದಾಲ್ಕನೀಯಾ ವ್ಯಾಪ್ತಿಯಲ್ಲಿ ಸಿಂಹಗಳ ಮೃತದೇಹಗಳು ಪತ್ತೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ಪಿ ಪುರುಷೋತ್ತಮ್, ಕಳೆದ ಬುಧವಾರ ಗಿರ್ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ 7 ಸಿಂಹಗಳ ಶವ ಪತ್ತೆಯಾಗಿತ್ತು. ಮತ್ತೆ ಇದೀಗ ಇದೇ ಪ್ರದೇಶದಲ್ಲಿ 4 ಸಿಂಹಗಳ ಶವ ಪತ್ತೆಯಾಗಿದೆ. ಈ ಮೂಲಕ ಸಿಂಹಗಳ ಸಾವಿನ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಸಿಂಹಗಳ ಸಾವಿನಲ್ಲಿ ಯಾವುದೇ ರೀತಿಯ ಷಡ್ಯಂತ್ರ ಕಾಣುತ್ತಿಲ್ಲ. ಆಹಾರ ಮತ್ತು ಸಂತಾನೋತ್ಪತ್ತಿ ಸಂದರ್ಭಗಳಲ್ಲಿ ವನ್ಯಮೃಗಗಳ ಕಾದಾಟ ಸಾಮಾನ್ಯ. ಬಹುಶಃ ಇದೇ ಸಿಂಹಗಳ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.

ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಯಾದ ಡಾ. ರಾಜೀವ್ ಕುಮಾರ್ ಗುಪ್ತಾ ಮಾತನಾಡಿ, ಪ್ರಸ್ತುತ ದೊರೆತ ಸಿಂಹಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು. ಈ ಹಿಂದೆ ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆಯಲ್ಲಿ ಸಿಂಹಗಳ ಸಾವಿಗೆ ಕಾದಾಟದಿಂದ ಆದ ಗಾಯಗಳೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ದೊರೆತಿರುವ ಶವಗಳನ್ನೂ ಜುನಾಘಡ್ ನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೇಲ್ನೋಟಕ್ಕೆ ಇದೂ ಕೂಡ ಕಾದಾಟದಿಂದ ಸಂಭವಿಸಿದ ಸಾವು ಎಂದು ಹೇಳಿದ್ದಾರೆ.

ಅಲ್ಲದೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ ಎಂದಿದ್ದಾರೆ. 2015ರ ಸಿಂಹಗಳ ಗಣತಿಯ ಪ್ರಕಾರ ಗಿರ್ ಅರಣ್ಯ ಪ್ರದೇಶದಲ್ಲಿ ಒಟ್ಟು 520 ಸಿಂಹಗಳಿದ್ದವು ಎಂದು ತಿಳಿದು ಬಂದಿದೆ.

lions fight Kruger South Africa 733288

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article