ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಸಂಬಂಧ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ 11 ಪುಟಗಳ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ಕಣ್ಣೀರು ಹಾಕಿರೋ ಅಖಂಡ, ಮಾಜಿ ಮೇಯರ್ ಮತ್ತು ಡಿ ಜೆ ಹಳ್ಳಿ ಕಾರ್ಪೋರೇಟರ್ ಸಂಪತ್‍ರಾಜ್, ಪುಲಿಕೇಶಿ ನಗರ ಕಾರ್ಪೋರೇಟರ್ ಅಬ್ದುಲ್ ರಕಿಬ್ ಝಾಕೀರ್, ನಾಗವಾರ ಕಾರ್ಪೋರೇಟರ್ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ವಿರುದ್ಧ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದಳ್ಳುರಿ ಸಂಬಂಧ ಖಲೀಂ ಪಾಷಾ ಮತ್ತು ಸಂಪತ್‍ರಾಜ್ ಪಿಎ ಅರುಣ್‍ನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ಝಾಕೀರ್ ಮತ್ತು ಸಂಪತ್‍ರಾಜ್ ಫೋನ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಾರ್ಪೋರೇಟರ್ ಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಸದ್ಯ ಇರುವ ಸಾಕ್ಷ್ಯಗಳು ಮತ್ತು ಹೇಳಿಕೆಯ ಆಧಾರದಲ್ಲಿ ಸಂಪತ್‍ರಾಜ್ ಮತ್ತು ಅಬ್ದುಲ್ ರಕೀಬ್ ಝಾಕೀರ್ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡುವ ಸಾಧ್ಯತೆಯೂ ಇದೆ.
Advertisement
Advertisement
2018ರ ವಿಧಾನಸಭೆ ಚುನಾವಣೆಯಲ್ಲಿ ಸಂಪತ್‍ರಾಜ್‍ಗೆ ಟಿಕೆಟ್ ಮಿಸ್ ಆಗಿತ್ತು. ಜೆಡಿಎಸ್‍ನಿಂದ ಬಂದಿದ್ದ ಅಖಂಡಗೆ ಟಿಕೆಟ್ ನೀಡಿದ್ದರಿಂದ ಸಂಪತ್‍ರಾಜ್ ನಿರಾಸೆ ಆಗಿತ್ತು. ಅತ್ಯಧಿಕ ಮತಗಳಿಂದ ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಗೆಲುವು ಸಾಧಿಸುತ್ತಾರೆ. ಆದ್ರೆ ಪುಲಿಕೇಶಿನಗರ ಬದಲು ಸಿ.ವಿ.ರಾಮನ್ ನಗರದಲ್ಲಿ ಸ್ಪರ್ಧಿಸಿದ್ದ ಸಂಪತ್‍ರಾಜ್‍ಗೆ ಸೋಲು ಅನುಭವಿಸುತ್ತಾರೆ. ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್‍ಗೂ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಆರಂಭದಲ್ಲೇ ದ್ವೇಷವಿತ್ತು ಎನ್ನಲಾಗಿದೆ.
Advertisement
Advertisement
ಮುಂದಿನ ವಿಧಾನಸಭಾ ಚುನಾವಣೆಗೆ ಪುಲಿಕೇಶಿನಗರದ ಮೇಲೆ ಸಂಪತ್‍ರಾಜ್ ಕಣ್ಣಿಟ್ಟಿದ್ದರು. ಹೀಗಾಗಿ ನನ್ನ ವಿರುದ್ಧ ಕಾರ್ಪೋರೇಟರ್ ಗಳ ಜೊತೆಗೆ ಸೇರಿಕೊಂಡು ಪಿತೂರಿ ನಡೆಸಿ ಮುಸ್ಲಿಮರನ್ನು ಎತ್ತಿಕಟ್ಟಲು ಹುನ್ನಾರ ನಡೆಸಿದ್ದರು. ಜೆಡಿಎಸ್ ಬಿಟ್ಟ ಬಳಿಕ ನನ್ನ ವಿರುದ್ಧ ವಾಜಿದ್ ಪಾಷಾ ದ್ವೇಷ ಬೆಳೆಸಿಕೊಂಡಿದ್ದರು. ಸಗಾಯಿಪುರ ವಾರ್ಡ್‍ನಲ್ಲಿ ಸೋತಿದ್ದ ಎಸ್‍ಡಿಪಿಐನ ಮುಜಾಮಿಲ್‍ಗೂ ನನ್ನ ವಿರುದ್ಧ ದ್ವೇಷ ಇತ್ತು. ಗಲಭೆ ದಿನ ನಾನೇನಾದರೂ ಸಿಕ್ಕಿದ್ದರೆ ನನ್ನನ್ನು ಜೀವಂತವಾಗಿ ಸುಟ್ಟು ಬಿಡುತ್ತಿದ್ದರು. ಮುಂದಿನ ಎಲೆಕ್ಷನ್‍ನಲ್ಲೂ ನಾನು ಗೆದ್ದೇ ಗೆಲ್ತೀನಿ, ಪಕ್ಷಾಂತರ ಮಾಡಿ ಸ್ಪರ್ಧಿಸಿದ್ರೂ ಗೆಲ್ತೀನಿ. ನಾನು ಗೆಲ್ತೀನಿ ಅಂತ ಗೊತ್ತಿದ್ದೇ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಗುಮಾನಿ ಇತ್ತು. ಆದ್ರೆ ಇಷ್ಟರ ದೊಡ್ಡ ಮಟ್ಟಿಗೆ ಸಂಚು ಮಾಡ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.