ಶ್ರೀನಗರ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೇ ಸೇವೆ ಶ್ರೀನಗರದಲ್ಲಿ 11 ತಿಂಗಳ ನಂತರ ಪುನರಾರಂಭಗೊಂಡಿದೆ. ಇತ್ತ ಶ್ರೀನಗರದ ರೈಲ್ವೇ ನಿಲ್ದಾಣದ ಬಳಿಯಲ್ಲಿ ಸುಧಾರಿತ ಐಇಡಿ ಸ್ಫೋಟಕ ಸಿಕ್ಕಿದೆ. ಶ್ರೀನಗರ- ಬಾರಾಮುಲ್ಲಾ ಹೆದ್ದಾರಿಯ ಸೇತುವೆ ಬಳಿ ಐಇಡಿ ಪತ್ತೆಯಾಗಿದೆ.
ಐಇಡಿ ಲಭ್ಯವಾಗುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಭದ್ರತಾ ಸಿಬ್ಬಂದಿ ಸುತ್ತಲಿನ ಪ್ರದೇಶದಲ್ಲಿ ಸರ್ಚಿಂಗ್ ಅಪರೇಷನ್ ಆರಂಭಿಸಿದ್ದಾರೆ. ಬಿನಿಹಾಲ್-ಬಾರಮುಲ್ಲಾ ನಡುವೆ ಒಟ್ಟು 17 ರೈಲ್ವೇ ನಿಲ್ದಾಣಗಳು ಬರಲಿವೆ. ಫೆಬ್ರವರಿ 22ರಿಂದ ಬನಿಹಾಲ್-ಬಾರಮುಲ್ಲಾ ನಡುವಿನ ರೈಲ್ವೇ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು.
Advertisement
Advertisement
ಕೊರೊನಾ ಹಿನ್ನೆಲೆ 2020 ಮಾರ್ಚ್ 19ರಿಂದ ಕಾಶ್ಮೀರದ ಘಟ್ಟ ಪ್ರದೇಶದಲ್ಲಿನ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು. ಉದಮಪುರ-ಶ್ರೀನಗರ-ಬಾರಾಮುಲ್ಲಾ ನಡುವಿನ ರೈಲ್ವೇ ಲಿಂಕ್ (ಯುಎಸ್‍ಬಿಆರ್ ಎಲ್) ಆರಂಭಗೊಳ್ಳಲಿದೆ. ಕಾಶ್ಮೀರ ದೇಶದ ವಿವಿಧ ನಗರಗಳೊಂದಿಗೆ ಸಂಪರ್ಕ ಹೊಂದಲಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದರು.
Advertisement
Advertisement
ಪೊಲೀಸರ ಮೇಲೆ ಫೈರಿಂಗ್: ಶುಕ್ರವಾರ ಉಗ್ರರು ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಫೈರಿಂಗ್ ವೇಳೆ ಗಾಯಗೊಂಡಿದ್ದ ಇಬ್ಬರು ಪೊಲೀಸರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಉಗ್ರರು ಎಕೆ-47 ಬಳಸಿ ಗುಂಡಿನ ದಾಳಿ ನಡೆಸಿರೋದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.