– ಬಾಲಕಿಯ ತಂದೆ ಅಂಧ, ತಾಯಿ ಸಹ ಅಂಗವಿಕಲೆ
– ಬಾಲಕಿಯ ಅಸಹಾಯಕತೆಯನ್ನೇ ಬಳಸಿ ಅತ್ಯಾಚಾರಗೈದ
ಡೆಹ್ರಾಡೂನ್: ಸರ್ಕಾರಿ ಕ್ವಾರ್ಟರ್ಸ್ ನ ಬಾತ್‍ರೂಂನಲ್ಲಿಯೇ 11 ವರ್ಷದ ಬಾಲಕಿಯ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಉತ್ತರಾಖಂಡ್‍ನ ಡೆಹ್ರಾಡೂನ್‍ನ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಸಂಜೀವ್ ಜುಗಾಡಿ ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡ್ ಪೊಲೀಸ್‍ನ 112 ತುರ್ತು ಸಹಾಯವಾಣಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. 11 ವರ್ಷದ ಬಾಲಕಿಯ ತಂದೆ ಅಂಧರಾಗಿದ್ದು, ಅವರ ತಾಯಿ ಸಹ ದಿವ್ಯಾಂಗರಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಪೊಲೀಸ್ ಶೌಚಾಲಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮಗಳ ಸ್ಥಿತಿ ಕುರಿತು ಅರಿತ ತಾಯಿ, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ಸರ್ಕಲ್ ಇನ್ಸ್‍ಪೆಕ್ಟರ್ ಶೇಖರ್ ಚಂದ್ ಸುಯಾಲ್ ಮಾಹಿತಿ ನೀಡಿ, 11 ವರ್ಷದ ಬಾಲಕಿಯ ಕುಟುಂಬ ಹಾಗೂ ಆರೋಪಿ ಒಂದೇ ಕಾಂಪ್ಲೆಕ್ಸ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶೌಚಾಲಯದಲ್ಲೇ ಬಾಲಕಿಯನ್ನು ಲಾಕ್ ಮಾಡಿದ
ಮಧ್ಯಾಹ್ನ ಬಾಲಕಿ ಶೌಚಾಲಯಕ್ಕೆ ತೆರಳಿದ್ದು, ತುಂಬಾ ಸಮಯವಾದರೂ ಹೊರಗೆ ಬಂದಿಲ್ಲ. ಆಗ ಬಾಲಕಿಯ ತಾಯಿ ಮಗಳನ್ನು ನೋಡಲು ಶೌಚಾಲಯದ ಬಳಿ ಬಂದಿದ್ದಾರೆ. ಈ ವೇಳೆ ತಾಯಿ ಹಲವು ಬಾರಿ ಮಗಳನ್ನು ಕರೆದಿದ್ದಾರೆ, ಆದರೆ ಬಾಲಕಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಶೌಚಾಲಯದ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ತಾಯಿ ನೋಡಿದ್ದಾರೆ.
ಇದನ್ನರಿತ ಆರೋಪಿ ಪೊಲೀಸ್ ಜುಗಾಡಿ ಇದ್ದಕ್ಕಿದ್ದಂತೆ ಶೌಚಾಲಯದ ಬಾಗಿಲು ತೆರೆದು ಪರಾರಿಯಾಗಿದ್ದಾನೆ. ನಂತರ ಬಾಲಕಿ ತಾಯಿ ಶೌಚಾಲಯದ ಬಾಗಿಲು ತೆರೆದು ಒಳಗೆ ಹೋಗಿದ್ದು, ಬಾಲಕಿ ಪ್ರಜ್ಞಾಹೀನಳಾಗಿ ಮಲಗಿರುವುದನ್ನು ಗಮನಿಸಿದ್ದಾರೆ. ತಾಯಿ ಮಗಳನ್ನು ಮನೆಗೆ ಕರೆತಂದಿದ್ದು, ಈ ಕುರಿತು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಪಕ್ಕದ ಮನೆಯವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ಜುಗಾಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಲು ತಂಡವನ್ನು ರಚಿಸಿದ್ದರು. ನಂತರ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪೊಲೀಸ್ ಅಧಿಕಾರಿಯನ್ನು ಇದೀಗ ಜೈಲಿಗಟ್ಟಲಾಗಿದೆ.
ಪೊಲೀಸ್ ಅಧಿಕಾರಿ ಸುಯಾಲ್ ಅವರು ಈ ಕುರಿತು ಮಾಹಿತಿ ನೀಡಿ, ಇಲಾಖೆ ಸಹ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಬಳಿಕ ಮನೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.