ಕಿಲ್ಲರ್ ಕೊರೊನಾಗೆ ಸವಾಲ್ ಹಾಕಿ ಗುಣಮುಖರಾದ 106 ವರ್ಷದ ವೃದ್ಧ

Public TV
1 Min Read
corona 1 1

ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಸಾವನ್ನಪ್ಪಿದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಭಾರತದಲ್ಲಿ 106 ವರ್ಷದ ವೃದ್ಧರೊಬ್ಬರು ಮಹಾಮಾರಿಗೆ ಸವಾಲ್ ಹಾಕಿ ಸೋಂಕಿನಿಂದ ಗುಣಮುಖರಾಗಿ ವೈದ್ಯರಿಗೇ ಅಚ್ಚರಿ ಮೂಡಿಸಿದ್ದಾರೆ.

Corona Lab a

ಇಳಿ ವಯಸ್ಸಿನವರು ಕೊರೊನಾಗೆ ಬಹುಬೇಗ ತುತ್ತಾಗುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆದ್ದರಿಂದ ಸೋಂಕಿಗೆ ತುತ್ತಾದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ಆದರೆ ದೆಹಲಿಯ ನವಾಬ್‍ಗಂಜ್‍ನ ಮುಖ್ತರ್ ಅಹ್ಮದ್(106) ಅವರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ ಇವರು ಭಾರತದಲ್ಲಿ ಕೊರೊನಾದಿಂದ ಗುಣಮುಖರಾದ ಮೊದಲ ಅತ್ಯಂತ ಹಿರಿಯ ವ್ಯಕ್ತಿ ಆಗಿದ್ದಾರೆ.

Corona new a

ಏಪ್ರಿಲ್ 14ರಂದು ಮುಖ್ತರ್ ಅಹ್ಮದ್ ಅವರನ್ನು ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 1ರಂದು ಅಹ್ಮದ್ ಅವರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

Corona 26

ಮಗನಿಗೆ ಸೋಂಕು ತಗುಲಿದ್ದ ಕಾರಣಕ್ಕೆ ಅದು ಅಹ್ಮದ್ ಅವರಿಗೂ ಹರಡಿತ್ತು. ಆದರೆ ಇತ್ತ ಕೊರೊನಾವನ್ನು ಗೆದ್ದು ಅಹ್ಮದ್ ಅವರು ಗುಣಮುಖರಾಗಿದ್ದಾರೆ. ಅತ್ತ ಮಗ ಮಾತ್ರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಹ್ಮದ್ ಅವರಲ್ಲಿ ಸೋಂಕು ದೃಢಪಟ್ಟ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಆರಂಭಿಸಿದೆವು. ಆಹ್ಮದ್ ಅವರಿಗೆ 106 ವರ್ಷ ವಯಸ್ಸಾಗಿದ್ದ ಕಾರಣಕ್ಕೆ ಚಿಕಿತ್ಸೆ ನೀಡುವುದು ಸವಾಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದ ಪರಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಅವರು ಕೊರೊನಾದಿಂದ ಗುಣವಾಗಿದ್ದು ನಮಗೆ ಖುಷಿಯಾಗಿದೆ. ಈ ಪ್ರಕರಣ ನಮಗೆ ಕೆಲಸದಲ್ಲಿ ಉತ್ಸಹವನ್ನು ಹೆಚ್ಚಿಸಿದೆ. ಅಹ್ಮದ್ ಅವರು ನೂರು ವರ್ಷ ದಾಟಿದ ವೃದ್ಧರೂ ಕಿಲ್ಲರ್ ಕೊರೊನಾ ವಿರುದ್ಧ ಹೋರಾಡಿ ಗುಣಮುಖವಾಗಬಹುದು ಎನ್ನುವುದನ್ನ ನಿರೂಪಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *