104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್‌

Public TV
2 Min Read
Kodagu Landslide 1

ಮಡಿಕೇರಿ: ದೇವರನಾಡು ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತದ (Wayanad Landslides) ನಂತರ ಕೊಡಗು (Kodagu) ಜಿಲ್ಲೆಯಲ್ಲೂ ಆತಂಕದ ಕರಿಛಾಯೆ ಆವರಿಸಿದೆ. 2018ರಲ್ಲಿ ಸಂಭವಿಸಿದ ದುರಂತಗಳು ಕಣ್ಣ ಮುಂದೆ ಬರುತ್ತಿವೆ. ‘ಗುಡ್ಡದ ಭೂತ’ದ ಭಯವೂ ಮೂಡಿದೆ. ಮುಂಗಾರು ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಬೆಟ್ಟ-ಗುಡ್ಡ, ನದಿ ಅಂಚಿನಲ್ಲಿ ಸೇರಿದಂತೆ ಅಪಾಯದ ಸ್ಥಳದಲ್ಲಿ ನೆಲೆನಿಂತಿರುವವರ ಸ್ಥಳಾಂತರ ಒಂದೇ ಪರಿಹಾರ ಎಂಬ ಚರ್ಚೆಯೂ ಎದ್ದಿದೆ.

ಕಳೆದ ಜು.31 ರಂದು ಕಂದಾಯ ಸಚಿವ ಕೃಷ್ಣಬೈರೇಗೌಡ (krishna byre gowda) ಅವರು ನೀಡಿರುವ ನಿರ್ದೇಶನವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ವಿಜ್ಞಾನಿಗಳ ವರದಿ, ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶಗಳ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ‘ಮ್ಯಾಪಿಂಗ್’ ಮಾಡಲಾಗಿದ್ದು, ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

Kodagu Landslide 2

ಈಗಾಗಲೇ ಸುಮಾರು 313 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಸದ್ಯ 10 ಪರಿಹಾರ ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದೆ. ಅಪಾಯದಲ್ಲಿರುವ ಕೆಲವರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಹಲವರು ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಇದನ್ನೂ ಓದಿ: Karnataka Rain Alert: ಮಳೆ ಕಡಿಮೆಯಾದ್ರೂ ನಿಲ್ಲದ ಅವಾಂತರ; ಕರಾವಳಿಯಲ್ಲಿ ಅಪಾಯದ ಮಟ್ಟ ಮೀರಿದ ನದಿಗಳು

ʻಆಗಸ್ಟ್ ಆಂತಕʼ
ಜಿಲ್ಲೆಯಲ್ಲಿ ವಾಡಿಕೆಗಿಂತ 24% ಹೆಚ್ಚಿನ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ‘ಆಗಸ್ಟ್ ಆತಂಕ’ವೂ ಹುಟ್ಟಿಕೊಂಡಿದೆ. ಆಗಸ್ಟ್ ಬಂತೆಂದರೆ ಜಿಲ್ಲೆಯ ಜನರಲ್ಲಿ ಆತಂಕ, ದುಗುಡ ಹೆಚ್ಚಾಗುತ್ತದೆ. ಬಿರುಸಿನ ಮಳೆ, ಮೈಕೊರೆಯುವ ಚಳಿಯಲ್ಲಿಯೂ ಬೆವರುವಂತಹ ಭಯ ಸೃಷ್ಟಿಯಾಗುತ್ತದೆ. 2018 ಆಗಸ್ಟ್ 16 ರಂದು ಜಿಲ್ಲೆಯಲ್ಲಿ ಹಿಂದೆಂದು ಕಾಣದಂತೆ ಸುರಿದ ಮಹಾಮಳೆ, ಸಂಭವಿಸಿದ ಪ್ರಾಕೃತಿಕ ವಿಕೋಪ ಇವೆಕ್ಕಲ್ಲ ಕಾರಣವಾಗಿವೆ. ಈ ವರ್ಷವೂ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅಪಾಯದಂಚಿನಲ್ಲಿರುವವರು ಮುಂದೇನು? ಎಂಬ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.

Kodagu Landslide 3

ವಯನಾಡಿನಲ್ಲಿ ನಡೆದ ದುರ್ಘಟನೆಯ ನಂತರ ಗುಡ್ಡ, ನದಿಯಂಚಿನಲ್ಲಿ ವಾಸಿಸುತ್ತಿರುವವರನ್ನು ಮಳೆಗಾಲದ ಸಂದರ್ಭದಲ್ಲಿ ಸ್ಥಳಾಂತರಿಸಬೇಕೆಂಬ ಚರ್ಚೆ ಮುನ್ನಲೆಗೆ ಬಂದಿದೆ. ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’ ವಿಪತ್ತು ಸಂಭವನೀಯ ಪ್ರದೇಶಗಳ ಪಟ್ಟಿ ನೀಡಿದೆ. ಇದರೊಂದಿಗೆ ಈ ಹಿಂದೆ ಪ್ರಕೃತಿ ದುರಂತ ಸಂಭವಿಸಿದ ಪ್ರದೇಶಗಳನ್ನು ಸೇರಿಸಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ಅಂತಿಮಗೊಳಿಸಿರುವ ಜಿಲ್ಲಾಡಳಿತ ಸ್ಥಳಾಂತರ ಮಾಡಬೇಕಾದ ಕುಟುಂಬಗಳನ್ನು ಪಟ್ಟಿ ಮಾಡಿಕೊಂಡಿದೆ.

2,995 ಕುಟುಂಬಗಳ ಗುರುತು
104 ಸಂಭವನೀಯ ವಿಪತ್ತು ಪ್ರದೇಶಗಳ 2,995 ಕುಟುಂಬಗಳನ್ನು ಗುರುತಿಸಲಾಗಿದೆ. ಇವರೆಲ್ಲ ಸ್ಥಳಾಂತರ ಪಟ್ಟಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಪಾಯದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನೋಟಿಸ್ ನೀಡಿ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗಳಲ್ಲಿ ನೆಲೆನಿಂತಿದ್ದಾರೆ. ಹಲವರು ಅಪಾಯದ ನಡುವೆಯೇ ಜೀವನ ಮುಂದುವರಿಸಿದ್ದಾರೆ ಸ್ಥಳಾಂತರವಾಗಿ ಎಂದರೆ ಎಲ್ಲಿಗೆ ಹೋಗುವುದು? ಎಂಬ ಪ್ರಶ್ನೆಯನ್ನು ನಿವಾಸಿಗಳು ಮಾಡುತ್ತಿದ್ದಾರೆ.

ಹೆಚ್ಚುವರಿ 95 ಕಾಳಜಿ ಕೇಂದ್ರ:
ಸಂಭವನೀಯ ವಿಪತ್ತು ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವ ಸಂಬಂಧವೂ ಸ್ಥಳವನ್ನು ಜಿಲ್ಲಾಡಳಿತ ಗುರುತು ಮಾಡಿಟ್ಟುಕೊಂಡಿದೆ. ಸದ್ಯ 10 ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 95 ಕಡೆಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಯಾಗಿದೆ. ಆದರೆ, ಜಾನುವಾರುಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬ ದೂರಿದೆ. ಈ ಬಗ್ಗೆಯೂ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ. ಒಟ್ಟಾರೆಯಾಗಿ ಪ್ರತಿ ಮಳೆಗಾಲದಲ್ಲಿಯೂ ಗ್ರಾಮೀಣ ಪ್ರದೇಶಗಳ ಜನತೆ ಭೂಕುಸಿತ, ಪ್ರವಾಹದ ಭಯದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಬಂದಿದ್ದು, ಪ್ರಕೃತಿ ಮುನಿಯದಿರಲಿ ಎಂಬ ಪ್ರಾರ್ಥನೆ ಮೊಳಗುತ್ತಿದೆ.

Share This Article