ಚಿಕ್ಕಮಗಳೂರು: ವೀಕೆಂಡ್ ಹಿನ್ನೆಲೆ ಇಂದು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೇವಲ ಮುಳ್ಳಯ್ಯನಗಿರಿಗಷ್ಟೇ ಸುಮಾರು ಆರು ಸಾವಿರಕ್ಕಿಂತ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.
1023 ಕಾರು, 425 ಬೈಕ್, 46 ಟಿಟಿ-ಮಿನಿ ಬಸ್‍ನಲ್ಲಿ ಸಾವಿರಾರು ಜನ ಮುಳ್ಳಯ್ಯಗಿರಿ ಭಾಗಕ್ಕೆ ಭೇಟಿ ನೀಡಿದ್ದರು. ಭಾರೀ ವಾಹನಗಳಿದ್ದ ಪರಿಣಾಮ ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ. ಸಾವಿರಾರು ಪ್ರವಾಸಿಗರು ಮಳೆಯಲ್ಲಿ ಮಿಂದು ಪ್ರಕೃತಿ ಸೌಂದರ್ಯವನ್ನ ಸವಿದಿದ್ದಾರೆ.
Advertisement
Advertisement
ಕೊರೊನಾ ಲಾಕ್‍ಡೌನ್ ಇದ್ದ ಕಾರಣ ಜಿಲ್ಲೆಯ ಪ್ರವಾಸಿ ತಾಣಗಳು, ದೇವಸ್ಥಾನಗಳು ಕಳೆದ ಎರಡ್ಮೂರು ತಿಂಗಳಿಂದ ಬಂದ್ ಆಗಿದ್ದವು. ಪ್ರವಾಸಿ ತಾಣಗಳಿಗೆ ನಿಷೇಧವಿದ್ದರೂ ದಿನನಿತ್ಯ ನೂರಾರು ಪ್ರವಾಸಿಗರು ಬಂದು, ಕೈಮರಾ ಚೆಕ್‍ಪೋಸ್ಟ್ ಸಿಬ್ಬಂದಿಗಳು ಬಿಡದಿದ್ದಾಗ ವಾಪಸ್ ಹೋಗುತ್ತಿದ್ದರು. ಹೊರ ಜಿಲ್ಲೆಗಳಿಂದಲೂ ಬಂದ ಪ್ರವಾಸಿಗರು ಗಿರಿಭಾಗದ ಬಾಗಿಲಿಗೆ ಬಂದು ಹಿಂದಿರುಗಿದ್ದರು. ಮುಳ್ಳಯ್ಯನಗಿರಿಯಲ್ಲಿ ಇಂದಿನ ಪ್ರವಾಸಿಗರನ್ನು ಕಂಡರೆ ಪ್ರವಾಸಿ ತಾಣಗಳು ಓಪನ್ ಆಗುವುದನ್ನೇ ಚಾತಕ ಪಕ್ಷಿಗಳಂತೆ ಪಕ್ಷಿಗಳಂತೆ ಕಾಯುತ್ತಿದ್ದರಾ ಎಂಬ ಅನುಮಾನ ವ್ಯಕ್ತವಾಗಿದೆ.
Advertisement
Advertisement
ಅನ್‍ಲಾಕ್ ಬಳಿಕ ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಗಾಳಿಕೆರೆ, ದೇವರಮನೆ ಗುಡ್ಡ ಭಾಗ ಸೇರಿದಂತೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ಹಾಗೂ ಕಳಸ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರು ಹಾಗೂ ಭಕ್ತರು ದಾಂಗುಡಿ ಇಡುತ್ತಿದ್ದಾರೆ. ಜಿಲ್ಲೆಗೆ ಈ ರೀತಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರೋದು ಜನರನ್ನ ಆತಂಕಕ್ಕೆ ದೂಡಿದೆ.
ಕಳೆದೊಂದು ವಾರದಿಂದಲೂ ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇನ್ನು ವೀಕೆಂಡ್ ಹಿನ್ನೆಲೆ ಗಿರಿ ಭಾಗದ ಬಹುತೇಕ ಹೋಮ್ ಸ್ಟೇ, ರೆಸಾರ್ಟ್‍ಗಳು ಸಂಪೂರ್ಣ ಬುಕ್ ಆಗಿವೆ. ರೂಮ್ ನೀಡುವಂತೆ ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದಾರೆ. ಹೀಗೆ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರನ್ನ ಕಂಡು ಜಿಲ್ಲೆಯ ಜನ ಕೊರೊನಾ ಮತ್ತೆ ಹೆಚ್ಚಾಗುತ್ತಾ ಎಂಬ ಆತಂಕದಲ್ಲಿ ಬದುಕುತ್ತಿದ್ದಾರೆ.