ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ರೂಪಾಂತರ ತಳಿ ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂದು ಒಂದೇ ದಿನ 13 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಕೊನೆಗೂ ನೂರರ ಗಡಿ ದಾಟಿದೆ.
ದೇಶದ 11 ರಾಜ್ಯಗಳಲ್ಲಿ ಈವರೆಗೆ 101 ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪ್ರಕರಣಗಳ ವ್ಯಾಪಕ ಹರಡುವಿಕೆಯನ್ನು ಆಧರಿಸಿ 19 ಜಿಲ್ಲೆಗಳನ್ನು ಅಪಾಯಕಾರಿ ಎಂದು ಆರೋಗ್ಯ ಸಚಿವಾಲಯ ಗುರುತಿಸಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್
ದೆಹಲಿಯಲ್ಲಿ ಇಂದು 10 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 22ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟ ಮುಂದುವರಿದಿದ್ದು, ಈ ರಾಜ್ಯವೊಂದರಲ್ಲೇ ಹೆಚ್ಚು ಅಂದರೆ 32 ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನ್‌ನಲ್ಲಿ 17, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 8. ಗುಜರಾತ್, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲೂ ಹೊಸ ತಳಿ ಪತ್ತೆಯಾಗಿದೆ.
ಮಕ್ಕಳಿಗೂ ಓಮಿಕ್ರಾನ್ ವಕ್ಕರಿಸಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ 3 ವರ್ಷದ ಬಾಲಕ ಹಾಗೂ 18 ವರ್ಷದ ಹುಡುಗಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ. ಅನಗತ್ಯ ಸಂಚಾರ, ಗುಂಪಾಗಿ ಜನ ಸೇರುವುದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಓಮಿಕ್ರಾನ್ ಸೋಂಕು ಈಗ ಇಡೀ ವಿಶ್ವದಲ್ಲೇ ವ್ಯಾಪಕವಾಗಿ ಹರಡುತ್ತಿದೆ. ಈವರೆಗೆ 77 ದೇಶಗಳು ಓಮಿಕ್ರಾನ್‌ನಿಂದ ತತ್ತರಿಸಿ ಹೋಗಿವೆ.