ಚಾಮರಾಜನಗರ: ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಪ್ರಯುಕ್ತ ಹಾಲರವಿ ಉತ್ಸವ ನಡೆಯಿತು.
ಹಾಲರವಿ ಉತ್ಸವವು ದೀಪಾವಳಿ ಜಾತ್ರಾ ಮಹೋತ್ಸವದ ವಿಶೇಷ ಉತ್ಸವವಾಗಿದ್ದು ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ವಿವಿಧ ವಾದ್ಯ ಮೇಳಗಳೊಂದಿಗೆ ದಟ್ಟ ಕಾನನದ ನಡುವೆ ಹರಿಯುವ ಹಾಲುಹಳ್ಳದಿಂದ 101 ಕುಂಭಗಳಲ್ಲಿ ಹಾಲರವಿ ತಂದು ಉತ್ಸವ ನೆರವೇರಿಸಿದರು.
Advertisement
ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಮಹಾಮಂಗಳಾರತಿ ಬೆಳಗಿಸಿ ನೈವೇದ್ಯ ಅರ್ಪಿಸಿ ದೀವಟಿಗೆ ಸೇವೆಯನ್ನು ಮಾಡಲಾಯಿತು. ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಇರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
Advertisement
101 ಬಾಲೆಯರು ಉಪವಾಸವಿದ್ದು, ಮಹದೇಶ್ವರ ಬೆಟ್ಟದಿಂದ 7 ಕಿ.ಮೀ. ದೂರವಿರುವ ಹಾಲುಹಳ್ಳದ ಗಂಗೆಯನ್ನು ಪುಟ್ಟ ತಾಮ್ರದ ಬಿಂದಿಗೆಯಲ್ಲಿ ತುಂಬಿ ಪೂಜೆ ನೆರವೇರಿಸಿದ ಬಳಿಕ ಅಲ್ಲಿಂದ ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟ ತಂಬಡಿಗೇರಿ ಮುಖ್ಯದ್ವಾರ ತಲುಪಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಬಳಿಕ ಮಂಗಳ ವಾದ್ಯಗಳ ಸಹಿತ ದೇವಾಲಯ ತಲುಪಿ ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಬಳಿಕ ಭಕ್ತರಿಗೆ ತೀರ್ಥ ವಿತರಿಸುವುದು ಹಾಲರವಿ ಉತ್ಸವವಾಗಿದೆ.
Advertisement
ಹಾಲರವಿ ಉತ್ಸವಕ್ಕೆ ಯಾವುದೇ ದೃಷ್ಟಿ ತಾಗದಿರಲೆಂದು ಮಾದಪ್ಪನ ಬೆಟ್ಟದ ತಂಬಡಿಗೇರಿಯ ಪ್ರವೇಶ ದ್ವಾರದಲ್ಲಿ ಗಂಗೆಯನ್ನು ಒಂದೆಡೆ ಇರಿಸಿ ಅದರ ಮುಂದೆ ಕತ್ತಿಯಿಂದ ದೃಷ್ಟಿ ತೆಗೆಯಲಾಯಿತು. ಹಾಲರವಿ ಉತ್ಸವವನ್ನು ಕಾಣಲು ರಾಜ್ಯ ಅಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಸಾಗರೋಪಾದಿಯಲ್ಲಿ ಮಾದಪ್ಪನ ಭಕ್ತರು ಆಗಮಿಸಿದ್ದರು. ಮಹಾ ರಥೋತ್ಸವ ನಡೆಯಲಿದ್ದು, ಅಂದೇ ರಾತ್ರಿ ಮಹಾಭಿಷೇಕದ ಬಳಿಕ ಕೊಂಡೋತ್ಸವ ನಡೆಯುವ ಮೂಲಕ ದೀಪಾವಳಿ ಜಾತ್ರೆ ಸಂಪನ್ನಗೊಳ್ಳಲಿದೆ.