ಮಂಡ್ಯ: ಇಂದು ರಾತ್ರಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಸರ್ವ ಜನರ ಒಳಿತಿಗಾಗಿ ಮಂಡ್ಯದಲ್ಲಿ 101 ದಂಪತಿಗಳಿಂದ ವಿಶೇಷ ಪೂಜೆ ನೆರವೇರಿದೆ.
ಮಂಡ್ಯ ನಗರದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರೊಂದು ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡು ಶತಮಾನಗಳ ದೀರ್ಘಾವಧಿ ಕೇತುಗ್ರಸ್ಥ ಚಂದ್ರ ಗ್ರಹಣದಿಂದ ನಾಡಿಗೆ ಯಾವುದೇ ಕೇಡುಕು ಉಂಟಾಗದಿರಲಿ, ರೈತಾಪಿ ವರ್ಗ ಸಂತಸದಿಂದರಲಿ ಹಾಗೂ ನಾಡಿನ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
Advertisement
Advertisement
ಮಂಡ್ಯದ ಪ್ರಮುಖ ದೇವಾಲಯಗಳು ಗ್ರಹಣ ಕಾಲದಲ್ಲಿ ಮುಚ್ಚಲ್ಪಡಲಿವೆ. ಮೊದಲನೇಯದಾಗಿ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯವು ಇಂದು ರಾತ್ರಿ 8 ಗಂಟೆಗೆ ಬಂದ್ ಆಗಲಿದೆ. ಇಂದು ಆಷಾಢ ಶುಕ್ರವಾರವಾದ್ದರಿಂದ ದೇವಾಲಯದಲ್ಲಿ ವಿಷೇಷ ಪೂಜೆ ನಡೆಯಲಿದೆ. ಇಂದು ರಾತ್ರಿ 11:54ಕ್ಕೆ ಆರಂಭವಾಗಲಿರುವ ಚಂದ್ರ ಗ್ರಹಣ ಕಾಲದಲ್ಲಿ ದೇವಾಲಯವು ಸಂಪೂರ್ಣ ಬಂದ್ ಆಗಲಿದ್ದು, ಗ್ರಹಣ ಮುಗಿಯುವವರೆಗೂ ನಿಮಿಷಾಂಭ ದೇವಿಯ ಮೂರ್ತಿಗೆ ನೀರಿನ ಅಭಿಷೇಕ ಮಾಡಲಾಗುತ್ತದೆ. ಗ್ರಹಣದ ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶನಿವಾರ ಬೆಳಿಗ್ಗೆ ದೇವಾಲಯ ಶುಚಿಗೊಳಿಸಿ ದೇವಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿರುತ್ತದೆ.
Advertisement
Advertisement
ಶ್ರೀರಂಗಪಟ್ಟಣದ ಮತ್ತೊಂದು ದೇವಾಲಯವಾದ ಶ್ರೀರಂಗನಾಥಸ್ವಾಮಿ ದೇವಾಲಯವು ಇಂದು ರಾತ್ರಿ 7:30ಕ್ಕೆ ಬಾಗಿಲು ಮುಚ್ಚಲಿದ್ದು, ಗ್ರಹಣ ಕಾಲದಲ್ಲಿ ಬಂದ್ ಆಗಿರಲಿದೆ. ಗ್ರಹಣ ಕಾಲ ಮುಗಿದ ಬಳಿಕ ಶನಿವಾರ ಬೆಳಿಗ್ಗೆ 6:30ಕ್ಕೆ ದೇವಾಲಯದ ಸ್ವಚ್ಛತಾ ಕಾರ್ಯ ಆರಂಭವಾಗಲಿದ್ದು, ದೇವಾಲಯ ಹಾಗೂ ದೇವರ ಮೂರ್ತಿಗೆ ಪ್ರೋಕ್ಷಣೆ ನಡೆಸಿ ಆನಂತರ ಅರ್ಚಕರು ಅಭಿಷೇಕ ನೆರವೇರಿಸಲಿದ್ದಾರೆ.
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯವು ಸಂಜೆ 7 ಗಂಟೆಗೆ ಬಾಗಿಲು ಮುಚ್ಚಲಿದ್ದು, ಇಂದು ರಾತ್ರಿ ನಡೆಯಬೇಕಿದ್ದ ಉಯ್ಯಾಲೆ ಉತ್ಸವ ಹಾಗೂ ರಾಜಮುಡಿ ಅಂಕುರಾರ್ಪಣೆಯನ್ನು ಇಂದು ಸಂಜೆಯೇ ನಡೆಸಿ ದೇವಾಲಯವನ್ನು ಸಂಜೆ 7 ಕ್ಕೆ ಬಾಗಿಲು ಹಾಕಲು ದೇವಾಲಯದ ಅರ್ಚಕ ವರ್ಗ ತೀರ್ಮಾನಿಸಿದೆ. ಶನಿವಾರ ಬೆಳಿಗ್ಗೆ ದೇವಾಲಯ ಶುದ್ಧೀಕರಣದ ನಂತರ ಚೆಲುವನಾರಾಯಣ ಸ್ವಾಮಿಗೆ ಅಭಿಷೇಕ ಮಾಡಿ ನಂತರ ಗ್ರಹಣ ಶಾಂತಿ ನಡೆಸಲಿದ್ದಾರೆ.