ಭೋಪಾಲ್: ತನ್ನನ್ನು ತಾನು `ಸಾವಿರ ಸಹೋದರಿಯರ ಸಹೋದರ’ ಎಂದು ಸ್ವಯಂ ಘೋಷಿಸಿಕೊಂಡಿದ್ದ ಕಾರ್ಪೋರೇಟರ್ 11 ವರ್ಷದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಬೇತುಲದಲ್ಲಿ ಈ ಘಟನೆ ನಡೆದಿದೆ. ಭಾತೃತ್ವಕ್ಕೆ ಅಪರೂಪದ ಉದಾಹರಣೆ ಎನ್ನುವಂತೆ ಬಿಂಬಿಸಿಕೊಂಡಿದ್ದ ಕಾರ್ಪೋರೇಟರ್ ರಾಜೇಂದ್ರ ಸಿಂಗ್ ಅಲಿಯಾಸ್ ಕೆಂದು ಬಾಬಾ ಈ ಕೃತ್ಯವೆಸೆಗಿದ್ದಾನೆ. ಸದ್ಯ 11 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಝಾಕೀರ್ ಹುಸೇನ್ ವಾರ್ಡ್ ಕಾರ್ಪೋರೇಟ್ ಆಗಿರುವ ಆರೋಪಿ ಬರೋಬ್ಬರಿ ಒಂದು ವರ್ಷ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಗ್ಗೆ ಯಾರಿಗಾದರೂ ಬಾಯ್ಬಿಟ್ಟರೆ ಪರಿಣಾಮ ಬಹಳ ಕೆಟ್ಟದಾಗಿರುತ್ತದೆ ಎಂದು ಆಕೆಗೆ ಬೆದರಿಕೆ ಹಾಕಿದ್ದ ಕಾರಣಕ್ಕೆ ಬಾಲಕಿ ದೌರ್ಜನ್ಯವನ್ನು ತನ್ನಲ್ಲಿಯೇ ನುಂಗಿಕೊಂಡು ಹಿಂಸೆ ಪಡುತ್ತಿದ್ದಳು.
ಆದರೆ ಅನಾಮಿಕ ವ್ಯಕ್ತಿಯೋರ್ವ ಪೊಲೀಸರಿಗೆ ಈ ಬಗ್ಗೆ ಪತ್ರ ಬರೆದು ಆರೋಪಿಯ ಕೃತ್ಯವನ್ನು ಬೆಳಕಿಗೆ ತಂದಿದ್ದಾನೆ. ರಾಜೇಂದ್ರ ಪ್ರತಿವರ್ಷ ರಕ್ಷಾಬಂಧನವನ್ನು ಭರ್ಜರಿಯಾಗಿ ಆಚರಿಸಿ, ತನ್ನನ್ನು ತಾನು `ಸಾವಿರ ಸಹೋದರಿಯರ ಸಹೋದರ’ ಎಂದು ಕರೆದುಕೊಳ್ಳುತ್ತಿದ್ದನು. ಆದರೆ ಸಾಮಾಜದಲ್ಲಿ ಒಳ್ಳೆಯವನ ರೀತಿ ಬಿಂಬಿಸಿಕೊಳ್ಳುತ್ತಿದ್ದ ಆರೋಪಿಯ ಅಸಲಿ ಬಣ್ಣವನ್ನು ಪತ್ರವೊಂದು ಬಯಲು ಮಾಡಿದೆ. ಈ ಪತ್ರದಲ್ಲಿ ಆರೋಪಿಯ ವಿರುದ್ಧ ಗಂಭೀರ ಆರೋಪಗಳಿವೆ ಎನ್ನಲಾಗಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಪೊಲೀಸರು ಸಂಪರ್ಕಿಸಿದ ಬಳಿಕ ಅತ್ಯಾಚಾರ ಎಸಗಿದ್ದು ಖಚಿತವಾಗಿದೆ. ಈ ಆಧಾರದ ಮೇಲೆ ಸೋಮವಾರ ರಾಜೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದನ್ನು ಬಾಲಕಿ ಬಾಯಿಬಿಟ್ಟಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಆಕೆಯ ಕುಟುಂಬಕ್ಕೆ ಬೆದರಿಕೆ ಭಯವಿರುವುದರಿಂದ ಅವರಿಗೆ ಸೂಕ್ತ ಭದ್ರತೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.