ವಾಷಿಂಗ್ಟನ್: ಅಮೆರಿಕದ (America) ಹೊರಗಡೆ ತಯಾರಾದ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
ಚಲನಚಿತ್ರ ಉದ್ಯಮವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!
ಅಮೆರಿಕದ ಮಾರುಕಟ್ಟೆಯಲ್ಲಿ ವಿದೇಶಿ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಸ್ಪರ್ಧಿಸುವುದರಿಂದ, ಇದು ಸ್ಥಳೀಯ ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸುತ್ತದೆ. ಇದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಗುರುತಿನ ಮೇಲೆ ವಿದೇಶಿ ಚಿತ್ರಗಳ ಪ್ರಭಾವ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ ಎಂದು ತಿಳಿಸಿದರು.
ಸದ್ಯ ಈ ಘೋಷಣೆಯು ಚಲನಚಿತ್ರ ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶ್ವದ ಇತರ ದೇಶಗಳಿಂದ, ವಿಶೇಷವಾಗಿ ಭಾರತ, ಚೀನಾ ಮತ್ತು ಯುರೋಪ್‌ನಿಂದ ತಯಾರಾದ ಚಿತ್ರಗಳು ಅಮೆರಿಕದಲ್ಲಿ ಜನಪ್ರಿಯವಾಗಿವೆ. ಈ ಸುಂಕ ನೀತಿಯಿಂದಾಗಿ ವಿದೇಶಿ ಸಿನಿಮಾಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಇದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆಗಳಿವೆ.
ಈ ಕ್ರಮವು ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಭಾರತದ ಬಾಲಿವುಡ್ ಚಿತ್ರಗಳು ಅಮೆರಿಕದಲ್ಲಿ ಗಮನಾರ್ಹ ಪ್ರೇಕ್ಷಕರನ್ನು ಹೊಂದಿದ್ದು, ಈ ಸುಂಕವು ಭಾರತೀಯ ನಿರ್ಮಾಪಕರಿಗೆ ಹೊಸ ಸವಾಲುಗಳನ್ನು ಸೃಷ್ಟಿಸಬಹುದು. ಇದಕ್ಕೆ ಪ್ರತಿಯಾಗಿ ಕೆಲವು ದೇಶಗಳು ಅಮೆರಿಕದ ಚಿತ್ರಗಳಿಗೆ ತಮ್ಮದೇ ಆದ ಪ್ರತಿ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ.
ಟ್ರಂಪ್ ಈ ನಿರ್ಧಾರದ ಕುರಿತು ಸ್ಪಷ್ಟನೆ ಬೇಕಾಗಿದ್ದು, ಈ ಸುಂಕ ಯಾವಾಗಿನಿಂದ ಜಾರಿಗೆ ಬರಲಿದೆ ಮತ್ತು ಯಾವ ರೀತಿಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ ಎಂಬುದು ತಿಳಿದುಬಂದಿಲ್ಲ. ಇದಕ್ಕೂ ಮೊದಲು ಟ್ರಂಪ್ ಭಾರತ ಸೇರಿ ಹಲವು ದೇಶಗಳ ಮೇಲೆ ಸುಂಕ ಸಮರ ನಡೆಸಿದ್ದರು.ಇದನ್ನೂ ಓದಿ: ಲಾಯರ್ ಜಗದೀಶ್ ಸಾವಿಗೆ ಟ್ಟಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು