ಹೈದರಾಬಾದ್: ತೆಲಂಗಾಣದ (Telangana) ಮಂಚೇರಿಯಲ್ ಜಿಲ್ಲೆಯಲ್ಲಿ ನೂರಾರು ಬೀದಿ ನಾಯಿಗಳ (Stray Dog) ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 7-8ರ ಮಧ್ಯರಾತ್ರಿ ಕಿಷ್ಟಾಪುರ ಗ್ರಾಮದಲ್ಲಿ ಸುಮಾರು 100 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ. ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾದ (ಎನ್‌ಜಿಒ) ಕಾರ್ಯಕರ್ತ ಎ. ಗೌತಮ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮದ ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡು ವಿಷಕಾರಿ ಚುಚ್ಚುಮದ್ದು ನೀಡಿ ಬೀದಿ ನಾಯಿಗಳನ್ನು ಕೊಂದು ನದಿಯ ಬಳಿ ಹೂಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಯುವತಿಗೆ HIV ಪಾಸಿಟಿವ್ ಇಂಜೆಕ್ಷನ್ ನೀಡಿದ ಯುವಕ
ದೂರಿನ ಆಧಾರದ ಮೇಲೆ, ಸರಪಂಚ್ ಮತ್ತು ಗ್ರಾಮ ಪಂಚಾಯತ್ ವಿರುದ್ಧ ಜನ್ನಾರಂ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ವರ್ಷದ ಜನವರಿ ಮತ್ತು ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೆಲಂಗಾಣದ ವಿವಿಧ ಜಿಲ್ಲೆಗಳಿಂದ ಬೀದಿ ನಾಯಿಗಳ ಸಾಮೂಹಿಕ ಹತ್ಯೆಯ ಹಲವಾರು ಘಟನೆಗಳು ವರದಿಯಾಗಿವೆ. ಈ ಘಟನೆಯೊಂದಿಗೆ ಬೀದಿನಾಯಿಗಳ ಸಾವಿನ ಸಂಖ್ಯೆ 1,300 ಕ್ಕೆ ಏರಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಗೆ ಮುನ್ನ ಬೀದಿ ನಾಯಿಗಳ ಹಾವಳಿಯನ್ನು ಪರಿಹರಿಸಲು ಗ್ರಾಮಸ್ಥರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಸಲುವಾಗಿ ಸರಪಂಚರು ಸೇರಿದಂತೆ ಕೆಲವು ಚುನಾಯಿತ ಪ್ರತಿನಿಧಿಗಳು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಪಂಜಾಬ್ | ಪಾಕ್ ಪೋಷಿತ ಉಗ್ರರ ಘಟಕದ ಮೇಲೆ ಪೊಲೀಸರ ದಾಳಿ – ಇಬ್ಬರು ಶಂಕಿತರು ಅರೆಸ್ಟ್

